ಹಿಂದಿನ ಸಂಚಿಕೆಯಲ್ಲಿ ವೀರಮರಣ ಶೀರ್ಷಿಕೆಯಡಿ ಮುದ್ರಣಗೊಂಡಿದ್ದ ವಿಚಾರವು ಅನೇಕರ ಮನಸ್ಸಿನ ನೋವಿಗೆ ಕಾರಣವಾಗಿತ್ತು.
ಡ್ರಗ್ಸ್ ಜಾಲವೊಂದರ ಬೆನ್ನಟ್ಟಿ ಹೋಗಿದ್ದ ಶಿವಾಜಿನಗರ ಪೊಲೀಸರಲ್ಲಿ ಪಿಎಸ್‌ಐ ಅವಿನಾಶ್ ಹಾಗೂ ಅನಿಲ್ ಮುಲಿಕ್ ಮೃತಪಟ್ಟರೆ, ಪಿಎಸ್‌ಐ ದೀಕ್ಷಿತ್ ಹಾಗೂ ಕಾನ್ಸ್ ಟೇಬಲ್ ಶರಣ ಬಸವ ತೀವ್ರವಾಗಿ ಗಾಯಗೊಂಡಿದ್ದರು. ಸಿಬ್ಬಂದಿಗಳ ಸಾವಿನಿಂದ ಬಹಳಷ್ಟು ನೊಂದಿದ್ದ ಡಿಸಿಪಿ ಭೀಮಾಶಂಕರ್ ಗುಳೇದ್, ಅಕ್ಷರಶಃ ಕುಟುಂಬದವರನ್ನು ಕಳೆದುಕೊಂಡAತೆ ಸಿಬ್ಬಂದಿಗಳ ಸಾವಿಗೆ ಕಣ್ಣೀರಾಗಿದ್ದರು. ಸಿಬ್ಬಂದಿಗಳ ಸಾವಿನ ಸುದ್ದಿ ಡಿಸಿಪಿಯವರನ್ನು ಬಹಳಷ್ಟು ಚಿಂತೆಗೀಡು ಮಾಡಿತ್ತು. ಆದರೂ ತಮ್ಮ ನೋವನ್ನು ಮರೆಮಾಚಿ, ಮನೆ ಮಕ್ಕಳನ್ನು ಕಳೆದುಕೊಂಡು ಕಂಗಾಲಾಗಿದ್ದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು, ಬಹಳಷ್ಟು ಧೈರ್ಯ ತುಂಬಿದ್ದರು. ಡಿಸಿಪಿಯವರ ಈ ಸಾಂತ್ವನ, ಧೈರ್ಯ, ಕೇವಲ ಮಾತುಗಳದ್ದಾಗಿರಲಿಲ್ಲ . ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಕುಟುಂಬದವರಿಗೆ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಸಾಬೀತು ಪಡಿಸಿದ್ದಾರೆ.
ಮನೆಗೆ ಆಸರೆಯಾಗಿದ್ದ ಆಧಾರ ಸ್ಥಂಬಗಳನ್ನು ಕಳೆದುಕೊಂಡು ದಿಕ್ಕೇ ತೋಚದೆ ಅನಾಥರಾಗಿದ್ದ ಕುಟುಂಬದವರಿಗೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ರುಜುವಾತುಪಡಿಸಿದ್ದಾರೆ. ಮೃತ ಪೊಲೀಸ್ ಕುಟುಂಬದವರಿಗೆ ಇಡೀ ಬೆಂಗಳೂರಿನ ಪೂರ್ವ ವಿಭಾಗದ ಪೊಲೀಸರು ಸಹಾಯ ಹಸ್ತ ಚಾಚಿದ್ದಾರೆ. ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಎಸಿಪಿಗಳು, ಇನ್ಸ್ಪೆಕ್ಟರ್‌ಗಳು ಒಂದು ತಿಂಗಳ ಸಂಬಳವನ್ನು ನೀಡಿದರೆ, ಎ.ಎಸ್.ಐ, ಹೆಡ್ ಕಾನ್ಸ್ಟೇಬಲ್, ಕಾನ್ಸ್ಟೇಬಲ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ತಮಗೆ ಕೈಲಾದಷ್ಟು ಹಣವನ್ನು ದೇಣಿಗೆಯಾಗಿ ನೀಡಿ ನಿಮ್ಮೊಂದಿಗೆ ನಾವಿದ್ದೇವೆ, ಎಂದು ಸಾರಿದ್ದಾರೆ. ಇದುವರೆಗೂ ಒಟ್ಟು ೫೬ ಲಕ್ಷದ ೬೩ ಸಾವಿರದ ೯೪೭ ರೂಪಾಯಿಗಳನ್ನು ಒಟ್ಟುಗೂಡಿಸಿದ್ದಾರೆ, ಇದರಲ್ಲಿ ಮೃತ ಪಟ್ಟ ಪಿಎಸ್ ಐ ಅವಿನಾಶ್ ಹಾಗೂ ಕಾನ್ಸ್ಟೇಬಲ್ ಅನಿಲ್ ಮೂಲ್ಕಿ ಕುಟುಂಬಸ್ಥರಿಗೆ ತಲಾ ೨೦ ಲಕ್ಷ ನೀಡಲಾಗುತ್ತಿದೆ. ಉಳಿದಂತೆ ಗಾಯಾಳುಗಳಾದ ಪಿಎಸ್ ಐ ದಿಕ್ಷೀತ್ ಹಾಗೂ ಶರಣಬಸವಗೆ ತಲಾ ೮ ಲಕ್ಷ ಹಣ ನೀಡಲಾಗುತ್ತಿದೆ.
“ಒಗ್ಗಟ್ಟಿನಲ್ಲಿ ಬಲವಿದೆ”ಎಂಬ ಪ್ರೇರಕ ಸಾಲಿಗೆ ಪೂರಕವೆಂಬಂತೆ ಪೊಲೀಸರು ತಮ್ಮ ಬಲವನ್ನು ಸಾಬೀತು ಪಡಿಸಿದ್ದಾರೆ ಡಿಸಿಪಿ ಭೀಮಾಶಂಕರ್ ಗುಳೇದ್ ಮುಂದಾಳತ್ವದ ಈ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ವ್ಯಕ್ತವಾಗುತ್ತಿದೆ.
ಹೊಣೆಗಾರಿಕೆ
ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ಅವರು ತಮ್ಮ ಕಾರ್ಯವೈಖರಿ ಇಂದಲೇ ಹೆಸರು ಮಾಡಿದವರು, ಈ ಹಿಂದೆ ತಮ್ಮ ವ್ಯಾಪ್ತಿಗೆ ಬರುವ ದಂಡಿನಶಿವರ ಠಾಣೆಯಲ್ಲಿ ದಾಖಲಾಗಿದ್ದ ಅಟ್ಟೆಂಪ್ಟ್ ಟು ಮರ್ಡರ್ ಕೇಸ್ ಒಂದರಲ್ಲಿ ಆರೋಪಿಗಳನ್ನು ಬಂಧಿಸಲು ಮೀನಾ ಮೇಷ ಎಣಿಸುತ್ತಿದ್ದ ಸಿಬ್ಬಂದಿಗಳಿಗೆ, ತಮ್ಮದೇ ಶೈಲಿಯಲ್ಲಿ ಚುರುಕು ಮುಟ್ಟಿಸಿದವರು ಈ ಖಡಕ್ ಅಧಿಕಾರಿ.
ದೂರುದಾರರು ಆರೋಪಿಗಳನ್ನು ಇನ್ನು ಏಕೆ ಬಂಧಿಸಿಲ್ಲ ಎಂದು ಕೇಳಲು ಹೋದರೆ ಆರೋಪಿಗಳನ್ನು ಹಿಡಿದು ತರಲು ನಮ್ಮ ಬಳಿ ಕಾರ್ ಇಲ್ಲ ಒಂದು ಕಾರಿನ ವ್ಯವಸ್ಥೆ ಮಾಡಿಕೊಂಡು ಬನ್ನಿ ಆರೋಪಿಗಳನ್ನು ಹಿಡಿದು ತರಲು ಹೋಗುತ್ತೇವೆ ಎಂದು ತಿಳಿಸುತ್ತಾರೆ.
ಇದೆ ವಿಚಾರವನ್ನು ದೂರುದಾರರು ಎಸ್ಪಿಯವರ ಗಮನಕ್ಕೆ ತರುತ್ತಾರೆ, ಕೂಡಲೇ ಎಸ್ಪಿಯವರು ತಮ್ಮ ಕಾರನ್ನು ಕೊಟ್ಟು ಪೊಲೀಸ್ ಠಾಣೆಗೆ ಕಳಿಸುತ್ತಾರೆ.ಠಾಣೆ ಮುಂದೆ ಎಸ್ಪಿ ಯವರ ಕಾರನ್ನು ಕಂಡ ಠಾಣೆಯ ಸಿಬ್ಬಂದಿ ಹೌಹಾರಿ ಬಿಡುತ್ತಾರೆ, ತಮ್ಮ ತಪ್ಪಿನ ಅರಿವನ್ನು ತಾವೇ ಮನಗೊಂಡು ಕೇವಲ ಒಂದು ದಿನದಲ್ಲಿ ಆರೋಪಿಗಳನ್ನು ಬಂಧಿಸಿ ಕರೆತರುತ್ತಾರೆ ಹಾಗೂ ತಮ್ಮ ತಪ್ಪಿಗೆ ಎಸ್ಪಿ ಯವರ ಬಳಿ ಕ್ಷಮೆ ಯಾಚಿಸುತ್ತಾರೆ, ಹೀಗೆ ತಮ್ಮದೇ ಶೈಲಿಯಲ್ಲಿ ಸಿಬ್ಬಂದಿಗಳಿಗೆ ಕರ್ತವ್ಯದ ಪಾಠ ಹೇಳಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.
ಆದರೆ ಇಂದು ಇವರು ಮತ್ತೆ ಸುದ್ದಿಯಲ್ಲಿರುವುದು ಇವರಲ್ಲಿರುವ ಮಾನವೀಯ ಗುಣಗಳಿಗೆ. ತುಮಕೂರಿನ ಕಳ್ಳಂ ಬೆಳ್ಳ ಸಮೀಪ ನಡೆದ ಅಪಘಾತದಲ್ಲಿ ಕ್ರೂಸರ್ ನಲ್ಲಿದ್ದ ೨೩ಜನ ಕೂಲಿ ಕಾರ್ಮಿಕರಲ್ಲಿ ೧೦ಜನ ಅಸುನೀಗಿದರೆ, ಇನ್ನುಳಿದ ಅನೇಕರು ಗಾಯಗೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ರವರು ಅಪಘಾತ ಸ್ಥಳದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿ, ಮತ್ತೆ ಆಸ್ಪತ್ರೆಗೆ ತೆರಳಿ ಅಪಘಾತದಲ್ಲಿ ಗಾಯಗೊಂಡಿದ್ದ ಮಗುವನ್ನು ಎತ್ತುಕೊಂಡು ಮಗುವನ್ನು ಉಪಚರಿಸಿದ ರೀತಿ ಬಹಳಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅಪಘಾತದಲ್ಲಿ ಆ ಮಗುವಿನ ತಾಯಿಯೂ ಸಹ ಗಾಯಗೊಂಡಿದ್ದು ಮಗುವನ್ನು ಸಂತೈಸಲು ಅಸಹಾಯಕಳಾಗಿ ದ್ದರಿಂದ, ಸ್ವತಃ ಎಸ್ಪಿ ಯವರೇ ಮಗುವನ್ನು ಸಂತೈಸಿ ಮಗುವಿನ ತಾಯಿ ಎಚ್ಬರಗೊಳ್ಳುವವರೆಗೆ ಮಗುವನ್ನು ಎತ್ತಿಕೊಂಡೆ ಆಕೆಯ ಬೆಡ್ ಬಳಿ ಕಾದು ಕುಳಿತಿದ್ದರು.
ಮಗುವಿನ ಸಂಕಟ ಕಂಡು ಅವರು ಮರುಗಿದ ರೀತಿ, ನಾನೊಬ್ಬ ಅಧಿಕಾರಿ ಎಂಬುದನ್ನೇ ಮರೆತು ಅವರು ಮಗುವನ್ನು ಸಂತೈಸಿದ ಪರಿ, ಎಲ್ಲವೂ ಎಲ್ಲರ ಕಣ್ಣಲ್ಲಿ ಯೂ ಪ್ರಶಂಸೆ ಹಾಗು ಹೆಮ್ಮೆಯ ಅಧಿಕಾರಿಯ ಹೊಣೆಗಾರಿಕೆಯ ಬಗ್ಗೆ ಅಭಿನಂದನೆ ಸಲ್ಲಿಸುವಂತಿತ್ತು.