ರೈಲ್ವೆ ಪೊಲೀಸ್ ಅಂದ್ರೆ ಏನು ಇವರ ಕಾರ್ಯ ವೈಖರಿ ಏನು ಎಂಬುದು ಯಾರ ಗಮನಕ್ಕೂ ಬಂದಿರುವುದಿಲ್ಲ. ರೈಲಿನಲ್ಲಿ ಓಡಾಡುವ ಜನರಿಗೂ ಇವರ ಬಗ್ಗೆ ಗಮನ ಹರಿದಿರುವುದಿಲ್ಲ, ಕರ್ನಾಟಕ ರಾಜ್ಯ ಸರ್ಕಾರದ ಗೃಹ ಇಲಾಖೆಯ ಅಡಿಯಲ್ಲೇ ಕಾರ್ಯ ನಿರ್ವಹಿಸುತ್ತಿರುವ ರೈಲ್ವೆ ಪೊಲೀಸರು ರೈಲಿನಲ್ಲಿ ಓಡಾಡುವ ಜನರ ರಕ್ಷಣೆಯ ಗುರಿಯನ್ನು ಹೊಂದಿರುವವರು.
ರೈಲಿನಲ್ಲಿ ಸಂಚರಿಸುವ ಜನರ ಮಾನ ಪ್ರಾಣ ಆಸ್ತಿಯ ರಕ್ಷಣೆಯ ಹೊಣೆಗಾರಿಕೆ ಇವರದ್ದು. ಸದ್ದು ಗದ್ದಲವಿಲ್ಲದೆ ತಮ್ಮ ಕಾರ್ಯವನ್ನು ಅಚ್ಚು ಕಟ್ಟಾಗಿ ಮಾಡುತ್ತಿರುವ ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗ ರೈಲ್ವೆ ಪೊಲೀಸ್.
ಆದರೆ ಈ ರೈಲ್ವೆ ಪೊಲೀಸರ ದಿನ ನಿತ್ಯದ ಕೆಲಸದ ಬಗ್ಗೆ ಆಳವಾಗಿ ತಿಳಿದು ಕೊಳ್ಳಲು ಹೊರಟರೆ, ಇವರ ಕಾರ್ಯ ವೈಖರಿಯಾ ಬಗ್ಗೆ ಹೆಮ್ಮೆ ಎನಿಸುತ್ತದೆ ಹಾಗೆಯೆ ಈ ಪೊಲೀಸರ ಬಗ್ಗೆ ಅದೇಕೋ ಒಂದು ರೀತಿಯ ಅನುಕಂಪವೂ ಉಂಟಾಗುತ್ತದೆ. ಅರೇ ! ಇದೇನು ಪೊಲೀಸರಿಗೆ ಅನುಕಂಪವೇ?
ಹೌದು ಪ್ರತಿನಿತ್ಯ ಒಂದಿಲ್ಲೊಂದು ಕಾರಣಗಳಿಂದ ಸಾವಿಗೀಡಾದ ಛಿದ್ರ ಛಿದ್ರ ಗೊಂಡ ದೇಹಗಳನ್ನು ಆಯ್ದು, ಒಟ್ಟುಗೂಡಿಸಿ, ಬಾಡಿ ಬ್ಯಾಗ್ ಗೆ ಸೇರಿಸುವ ಕಾರ್ಯ ಇವರದು. ನಾವು ಯಾವತ್ತೋ ಒಂದು ದಿನ ಪರಿಚಿತರಅಥವಾ ಸಂಬಂಧಿಕರ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದರೆ ಮೈಲಿಗೆ ಎಂದು ಸ್ನಾನ ಮಾಡುವ, ಅವರ ಅಂತ್ಯ ಸಂಸ್ಕಾರಕ್ಕೆ ಹೋಗಿ ಬಂದು ದೇಹ ನೋಡಿದ್ದರಿಂದ ಇಂದು ಮನಸ್ಸೇ ವಿಚಲಿತವಾಗಿದೆ ಯಾವ ಕೆಲಸ ಮಾಡಲೂ ಮನಸ್ಸೇ ಇಲ್ಲ ಎಂದು ಹೇಳುವ ಮಾತು ಸರ್ವೇ ಸಾಮಾನ್ಯ.
ಆದರೆ ಪ್ರತಿನಿತ್ಯ ಕನಿಷ್ಟ ಛಿದ್ರ ವಿಚಿದ್ರ ಗೊಂಡ ಒಂದು ದೇಹವನ್ನಾದರೂ ಆಯ್ದು ಬಾಡಿಬ್ಯಾಗ್‌ಗೆ ತುಂಬಿಸುವ ಕೆಲಸ ಮಾಡುತ್ತಿರುವ ಈ ನಮ್ಮ ರೈಲ್ವೆ ಪೊಲೀಸರ ಮನಃ ಸ್ಥಿತಿಯನ್ನು ಒಮ್ಮೆಯಾದರೂ ಆಲೋಚಿಸಲು ಸಾಧ್ಯವೇ.
ಇವರ ಇರುವಿಕೆಯನ್ನೇ ಗಮನಿಸದೆ ನಮ್ಮ ಪಾಡಿಗೆ ನಮ್ಮ ಗುರಿ ತಲುಪುವ ಊರು ಸೇರುವ ತವಕ ನಮ್ಮದು. ವೃತ್ತಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಇಂತಹ ಪೊಲೀಸ್ ಸಹೋದರ ಸಹೋದರಿಯರ ಕಾರ್ಯ ವೈಖರಿಗೆ ನಮ್ಮದೊಂದು ಸಲಾಂ.
ಜನಸ್ನೇಹಿ ಪೊಲೀಸ್ : ಪ್ರಸುತ್ತ ಪಿಎಸ್‌ಐ ಆಗಿ ರೈಲ್ವೆ ಪೊಲೀಸ್ ನಲ್ಲಿ ಕೆಲಸ ಮಾಡುತ್ತಿರುವ ಪುರುಷೋತ್ತಮ್ ರವರು ಇಂದಿನ ಸಂಚಿಕೆಯ ಜನಸ್ನೇಹಿ ಪೊಲೀಸ್.
ಪ್ರಾಂಶು ಸ್ವರೂಪ್ ಡೋಗ್ರ ಎಂಬ ಹೆಸರಿನ ರೈಲ್ವೆ ಪ್ರಯಾಣಿಕರೊಬ್ಬರು ರೈಲನ್ನು ಹತ್ತುವ ದಾವಂತದಲ್ಲಿ ತಮ್ಮ ಸೂಟ್ ಕೇಸ್ ಅನ್ನು ಫ್ಲಾಟ್ ಫಾರಂನಲ್ಲಿ ಮರೆತು ತಮ್ಮ ಊರು ಸೇರಿರುತ್ತಾರೆ, ಮನೆಗೆ ಹೋಗಿ ನೋಡಿಕೊಂಡಾಗ ತಾವು ತಮ್ಮ ಸೂಟ್‌ಕೇಸ್ ಮರೆತು ಬಿಟ್ಟು ಬಂದಿರುವುದಾಗಿ ಅರಿತು ವಾಪಾಸ್ ಬೆಂಗಳೂರಿಗೆ ಬಂದು ರೈಲ್ವೆ ಪೊಲೀಸರ ಬಳಿ ದೂರು ದಾಖಲಿಸುತ್ತಾರೆ. ಆದರೆ ಅದು ಕಳ್ಳತನವಾಗಿರುವುದಿಲ್ಲ ಕಳೆದುಕೊಂಡಿರುತ್ತಾರೆ ಹೀಗಾಗಿ ಇ-ಲಾಸ್ಟ್ನಲ್ಲಿ ದೂರು ದಾಖಲಾಗುತ್ತದೆ.
ಇ-ಲಾಸ್ಟ್ನಲ್ಲಿ ದಾಖಲಾದ ದೂರನ್ನು ತನಿಖೆ ನಡೆಸುವ ಪ್ರಮೇಯವೇ ಬರುವುದಿಲ್ಲ. ತದ ನಂತರ ಸ್ವರೂಪ್ ರವರ ತಾಯಿ ಜಯತಿ ಸಿಂಗ್‌ರವರು ರೈಲ್ವೆ ಎಸ್ಪಿ ಸಿರಿ ಗೌರಿಯವರನ್ನು ಸಂಪರ್ಕಿಸಿ ಮದುವೆಗಾಗಿ ಖರೀದಿಸಿದ್ದ ೧೩ ಲಕ್ಷ ಬೆಲೆಬಾಳುವ ಒಡವೆಗಳು ಆ ಸೂಟ್ ಕೇಸ್‌ನಲ್ಲಿ ಇದ್ದುದಾಗಿಯೂ ಅದು ಅವರ ತಂದೆಯವರು ಮಾಡಿಸಿಕೊಟ್ಟಿದ್ದ ಒಡವೆಗಳೆಂದು ದಯಮಾಡಿ ಸೂಟ್‌ಕೇಸ್ ಹುಡುಕಿಸಿ ಕೊಡುವಂತೆ ಅಂಗಲಾಚಿ ಬೇಡಿಕೊಳ್ಳುತ್ತಾರೆ. ಇವರ ಮನವಿಗೆ ಸ್ಪಂದಿಸಿದ ಸಿರಿ ಗೌರಿಯವರು ಪಿಎಸ್‌ಐ ಪುರುಷೋತ್ತಮ್ ರವರನ್ನು ಕರೆದು ಸಾಧ್ಯಾ ಸಾಧ್ಯತೆಗಳನ್ನು ಪರಿಶೀಲಿಸಿ ಸೂಟ್ ಕೇಸ್ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸುತ್ತಾರೆ.
೩೨ ವರ್ಷಗಳ ಅನುಭವ ಹೊಂದಿರುವ ಪುರುಷೋತ್ತಮ್ ರವರು ಟೆಕ್ನಿಕಲ್ ಆಧಾರದ ಮೇಲೆ ಪರಿಶೀಲನೆ ನಡೆಸಿ, ಸೂಟ್ ಕೇಸ್ ತೆಗೆದುಕೊಂಡು ಹೋದವರ ಸಿಸಿ ಟಿವಿ ಪರಿಶೀಲನೆ, ಅವರು ಹತ್ತುವ ಭೋಗಿ, ಸ್ಥಳ ಕಾಯ್ದಿರಿಸಿದ್ದರ ಮಾಹಿತಿ ಪಡೆದು ಫೋನ್ ನಂಬರ್‌ಗಳನ್ನೂ ಅಡ್ರೆಸ್ಸ್ ಅನ್ನು ಪತ್ತೆ ಹಚ್ಚಿ ಇವೆಲ್ಲ ಮಾಹಿತಿ ಮುಖೆನ ಮಧ್ಯಪ್ರದೇಶದ ಇಂದೋರ್‌ಗೆ ತೆರಳಿ ಸೂಟ್ಕೇಸ್ ವಾಪಾಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ರಿಮಿನಲ್ ಕೇಸ್‌ಗಳನ್ನೂ ಬಗೆಹರಿಸುವಲ್ಲಿ ಯಾವಾಗಲೂ ಟೆಕ್ನಿಕಲ್ ಮಾಹಿತಿ ಆಧಾರದ ಮೇಲೆ ಕಾರ್ಯನಿರ್ವಹಿಸಿ ಹಲವು ಪ್ರಕರಣಗಳನ್ನು ಬಗೆ ಹರಿಸಿರುವ ಅನುಭವ ಹೊಂದಿದ್ದ ಪುರುಷೋತ್ತಮ್ ರವರು ಈ ಸಮಸ್ಯೆಯನ್ನು ಬಗೆ ಹರಿಸಿ ನೊಂದವರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದುಕೊಂಡಿದ್ದನ್ನು ಮತ್ತೆ ಪಡೆದುಕೊಂಡ ಸ್ವರೂಪ್ ಕುಟುಂಬದವರು ಎಸ್ಪಿ ಸಿರಿಗೌರಿ ಆದಿಯಾಗಿ ಇಡೀ ಇಲಾಖೆಯನ್ನು ಹಾಡಿ ಹೊಗಳಿದ್ದಾರೆ. ಇವರ ಕಾರ್ಯಕ್ಕೆ ಡಿ ಜಿ ಪ್ರವೀಣ್ ಸೂದ್‌ರವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ರೈಲ್ವೆ ಎಸ್‌ಪಿ ಸಿರಿಗೌರಿಯವರು ವಹಿಸಿದ್ದ ಕಾರ್ಯವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ ಪಿಎಸ್‌ಐ ಪುರುಷೋತ್ತಮ್ ರವರಿಗೆ ಹಾಗೂ ಅವರ ತಂಡಕ್ಕೆ ಪ್ರಶಂಸನಾ ಪತ್ರ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮದ್ದಲ್ಲದ ಕಾರ್ಯ, ಅತಿಯಾದ ಹೊಣೆ ಹೊರುವುದೇಕೆ ಎಂದು ಪ್ರಯತ್ನಿಸದೆ ಕೈ ಕಟ್ಟಿ ಕೂರದೆ ಕಳೆದುಕೊಂಡವರ ಪಾಲಿನ ಆಶಾ ಕಿರಣವಾಗಿದ್ದರೆ ರೈಲ್ವೆ ಪೊಲೀಸ್.

