26.9 C
Bengaluru
Saturday, January 25, 2025

*ಮಕ್ಕಳ ಆಶಾಕಿರಣ ಇನ್ಸ್ಪೆಕ್ಟರ್ ರಾಮಪ್ಪ ಗುತ್ತೇರ್ *

Date:

ಪೊಲೀಸರೆಂದರೆ ಕಾನೂನು ರಕ್ಷಕರು, ಅಪರಾಧಿಗಳ ಎದೆಯ ಬಡಿತವನ್ನು ಹೆಚ್ಚಿಸುವವರು ಹಾಗೆಯೇ ಒಬ್ಬ ಪೊಲೀಸ್ ಅಧಿಕಾರಿಯ ವ್ಯಾಪ್ತಿಯಲ್ಲಿ ಕೊಲೆ ಕೇಸ್ ದಾಖಲಾದ ಕೂಡಲೇ ಆ ಅಧಿಕಾರಿಗೆ ಅಪರಾಧಿಗಳನ್ನು ಮೊದಲು ಪತ್ತೆ ಮಾಡಬೇಕು, ಆತನಿಂದ ಅನ್ಯಾಯ ಕ್ಕೊಳಗಾದವರಿಗೆ ಮೊದಲು ನ್ಯಾಯ ಕೊಡಿಸಬೇಕೆಂಬ ತವಕ, ಅದು ಅವರಿಗಿರುವ ವೃತ್ತಿಯ ತುಡಿತವೂ ಹೌದು. ಹೀಗೆಯೇ ಪೊಲೀಸ್ ಇನ್ಸ್ಪೆಕ್ಟರ್ ರಾಮಪ್ಪ ಗುತ್ತೆರ್ ರವರು ತಮ್ಮ ವ್ಯಾಪ್ತಿಯಲ್ಲಿ ದಾಖಲಾದ ಕೊಲೆ ಕೇಸ್ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ತನಿಖೆ ನಡೆಸುತ್ತಾರೆ, ಆರೋಪಿಯ ಪತ್ತೆಯೂ ಆಗುತ್ತದೆ, ಆರೋಪಿಯನ್ನು ಬಂಧಿಸಿ ಕಾರಾಗೃಹಕ್ಕೂ ಕಳಿಸುತ್ತಾರೆ. ಇದಾದ ಕೆಲವು ತಿಂಗಳುಗಳ ಬಳಿಕ ಎರಡು ಪುಟ್ಟ ಮಕ್ಕಳೊಡನೆ ಹಾಜರಾದ ವ್ಯಕ್ತಿ ಇನ್ಸ್ಪೆಕ್ಟರ್ ರಾಮಪ್ಪ ರವ ರನ್ನು ಕುರಿತು “ಸರ್ ನೀವೇನೋ ಈ ಮಕ್ಕಳ ತಂದೆಯನ್ನು ಆರೋಪಿ ಎಂದು ಬಂಧಿಸಿ ಕಾರಾಗೃಹಕ್ಕೆ ಕಳಿಹಿಸಿಬಿಟ್ಟಿರಿ, ಅನಾರೋಗ್ಯದಿಂದ ತಾಯಿಯು ಮೃತಪಟ್ಟಳು ಈಗ ಈ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ?”ಎಂದು ಕೇಳುತ್ತಾನೆ.


ಈತನ ಪ್ರಶ್ನೆ ಯಿಂದ ಆಶ್ಚರ್ಯ ಚಕಿತರಾದ ಇನ್ಸ್ಪೆಕ್ಟರ್ ಯಾರು ನೀವೆಲ್ಲ ಎಂದು ಕೇಳುತ್ತಾರೆ? ಸರ್ ಕೊಲೆ ಆರೋಪದಲ್ಲಿ ನೀವು ಬಂದಿಸಿದ ವ್ಯಕ್ತಿಯ ಮಕ್ಕಳು ಇವರು. ಇವರ ತಂದೆ ಕೊಲೆ ಆರೋಪದಲ್ಲಿ ಜೈಲಿಗೆ ಹೋದ ಅನಾರೋಗ್ಯದ ನಿಮಿತ್ತ ಇವರ ತಾಯಿ ತೀರಿಕೊಂಡಳು. ಈಗ ಈ ಮಕ್ಕಳು ಅನಾಥರು.ನಾನು ಈ ಮಕ್ಕಳ ದೊಡ್ಡಪ್ಪ ಗಾರೆ ಕೆಲಸ ಮಾಡುವ ನಮಗೆ ಎರಡೊತ್ತಿನ ಊಟಕ್ಕೂ ಕಷ್ಟ. ಹೀಗಿರುವಾಗ ಈ ಮಕ್ಕಳನ್ನು ಸಾಕುವ ಹೊಣೆ ಯಾರದ್ದು ಎನ್ನುತ್ತಾನೆ. ಕಾನೂನು ಸುವ್ಯವಸ್ಥೆಯ ಪಾಲನೆಯ ಹೊಣೆ ಮಾತ್ರ ನಮ್ಮದು ಎಂದು ಭಾವಿಸದ ಈ ಅಧಿಕಾರಿ ನನ್ನಿಂದ ನಿಮಗೇನು ಸಹಾಯ ಬೇಕು ಎಂದು ಕೇಳುತ್ತಾರೆ?
ತಕ್ಷಣವೇ ಮಕ್ಕಳ ಸಹಾಯಕ್ಕೆ ಏನು ಮಾಡಬೇಕು ಎಂದು ಚಿಂತಿಸುವ ರಾಮಪ್ಪ ಗುತ್ತೆರ್ ರವರು ಕೂಡಲೇ ಮಕ್ಕಳನ್ನು ಹತ್ತಿರದ ಯಾವುದಾದರೊಂದು ಹಾಸ್ಟೆಲ್ ಗೆ ಸೇರಿಸುವಂತೆ ತಿಳಿಸಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಜೀವನೋಪಾಯಕ್ಕೆ ನನ್ನ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡುತ್ತಾರೆ.ಐದು ವರ್ಷದ ಹಾಗೂ ಎಂಟು ವರ್ಷದ ಪುಟ್ಟ ಮಕ್ಕಳನ್ನು ಕಂಡ ಖಾಕಿಯೊಳಗಿನ ಮಾನವೀಯತೆ ಮಂಜಿನಂತೆ ಕರಗುತ್ತದೆ.
ಕಳೆದ ನಾಲ್ಕು ವರ್ಷಗಳಿಂದಲೂ ಮಕ್ಕಳಿಗೆ ಬೇಕಾದ ಬಟ್ಟೆ, ಪುಸ್ತಕ, ಬ್ಯಾಗು, ಶಿಕ್ಷಣಕ್ಕೆ ಬೇಕಾದ ಸಾಮಗ್ರಿಗಳನ್ನು ಕೊಡಿಸುತ್ತಾ, ಕೋವಿಡ್ ಸಮಯದಲ್ಲಿ ಹಾಸ್ಟೆಲ್ ಬಾಗಿಲು ಮುಚ್ಚಿ ಮಕ್ಕಳನ್ನು ಮನೆಗೆ ಕಳುಹಿಸಿದಾಗ ಇಡೀ ಕುಟುಂಬ ನಿರ್ವಹಣೆಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಕೊಡಿಸಿ ಮಕ್ಕಳನ್ನು ಪೋಷಿಸುತ್ತಿರುವ ಇನ್ಸ್ಪೆಕ್ಟರ್ ಕಾರ್ಯಕ್ಕೆ ಹೆಮ್ಮೆಯ ಸೆಲ್ಯೂಟ್.
ಒಂದು ಬಿಸ್ಕತ್ತಿನ ಪೊಟ್ಟಣ ಕೊಟ್ಟು ಸೆಲ್ಫಿ ತೆಗೆದು ಪ್ರಚಾರ ತೆಗೆದುಕೊಳ್ಳುವ ಈ ಸಮಯದಲ್ಲಿ, ತಮ್ಮ ಸಮಾಜಮುಖಿ ಕಾರ್ಯವನ್ನು ಸದ್ದು ಗದ್ದಲವಿಲ್ಲದೆ, ತಮ್ಮ ಪಾಡಿಗೆ ತಾವು ಮಾಡಿ ಅಷ್ಟೇ ಏಕ ಚಿತ್ತದಿಂದ ತಮ್ಮ ಕಾಯಕದಲ್ಲಿ ತಾವು ತಲ್ಲೀನ ರಾಗಿರುವ ಇನ್ಸ್ಪೆಕ್ಟರ್ ರಾಮಪ್ಪ ನವರ ಕಾರ್ಯ ಹಾಗೂ ಅವರ ಪ್ರಚಾರ ಬಯಸದ ಗುಣ ಎರಡು ಶ್ಲಾಘನೀಯ.
ನಾನು ಮೊದಲೇ ಹೇಳಿದಂತೆ ತಾವುಮಾಡಿದ ಒಳ್ಳೆ ಕಾರ್ಯಗಳನ್ನು ಯಾರಿಗೂ ತಿಳಿಸದೇ ನಮ್ಮ ಆರಕ್ಷಕರು ಮುಚ್ಚಿಡುತ್ತಿದ್ದರೂ, ಇವರಿಂದ ಸಹಾಯ ಪಡೆದವರು ನಮಗೆ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ತಿಳಿಸುತ್ತಿರುವುದು ನಿಜವಾಗಿ ಹೆಮ್ಮೆಯ ವಿಚಾರ. ಒಂಬತ್ತು ವರ್ಷದ ಮಗು ಇನ್ಸ್ಪೆಕ್ಟರ್ ಬಗ್ಗೆ ಹೇಳುವಾಗ ನನಗಿಷ್ಟವಾದ Kurkure ಕೊಡಿಸಿದ್ದರು ಎಂಬುದನ್ನು ಹೇಳಲು ಮರೆಯಲಿಲ್ಲ.
ಈ ಮಗುವಿನ ಅಣ್ಣ ಹನ್ನೆರಡು ವರ್ಷದ ಅಜಯ್ (ಹೆಸರು ಬದಲಿಸಲಾಗಿದೆ )ಇನ್ಸ್ಪೆಕ್ಟರ್ ಸಹಾಯದ ಬಗ್ಗೆ ಪ್ರಹರಿಯೊಂದಿಗೆ ಮಾತನಾಡುತ್ತ ಚೆನ್ನಾಗಿ ಓದು ಅದಕ್ಕಾಗಿ ಏನು ಸಹಾಯ ಬೇಕಾದರೂ ಮಾಡುವೆ ಎಂದಿದ್ದಾರೆ, ಎಷ್ಟೇ ಕಷ್ಟವಾದರೂ ಸಹ ಓದಿ ಅವರಂತೆ ಪೊಲೀಸ್ ಆಗಬೇಕೆಂದಿದ್ದೇನೆ, ನಾನು ಅವರಂತೆ ಅಸಹಾಯಕರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಕೊಂಡಿದ್ದೇನೆ. ನನಗೆ ಅವರೇ ಮಾದರಿ ಅಧಿಕಾರಿ ಎನ್ನುತ್ತಾನೆ.
ಪೊಲೀಸ್ ಎಂದರೆ ಕಾನೂನು ಸುವ್ಯವಸ್ಥೆಯ ಪರಿಪಾಲಕರು ಮಾತ್ರವಲ್ಲ, ಆರೋಪಿಯನ್ನು ಬಂಧಿಸಿ ನಮ್ಮ ಕಾರ್ಯ ಮುಗಿಯಿತೆಂದು ಕೈ ಕಟ್ಟಿ ಕೂರುವವರಲ್ಲ, ಮಾನವೀಯ ಮೌಲ್ಯಗಳ ಮಹಾಗುಣ ನಮ್ಮಲ್ಲೇ ಅಧಿಕವಾಗಿದೆ ಎಂದು ಮತ್ತೊಮ್ಮೆ ಮಗದೊಮ್ಮೆ ಸಾಬೀತು ಪಡಿಸುತ್ತಿದ್ದಾರೆ.
ಅಪರಾಧ ಮಾಡಿದ ಅಪರಾಧಿಗೆ ಮಾತ್ರ ಶಿಕ್ಷೆ , ಏನೂ ತಿಳಿಯದ ಮುಗ್ದ ಮನಸುಗಳಿಗೇಕೆ ಶಿಕ್ಷೆ ಎಂದು ಮುಗ್ದ ಮಕ್ಕಳ ನೆರವಿಗೆ ಧಾವಿಸಿದ ಇನ್ಸ್ಪೆಕ್ಟರ್ ರಾಮಪ್ಪ ಗುತ್ತೇರ್ ರವರ ಕಾರ್ಯ ಆದರ್ಶದಾಯಕ.
ಪೊಲೀಸರ ಸಣ್ಣ ಪುಟ್ಟ ಎಡವಟ್ಟುಗಳು ದೊಡ್ಡ ಮಟ್ಟದ ಸುದ್ದಿಯಾಗುವಾಗ ಇಂತಹ ಮಹತ್ಕಾರ್ಯಗಳು ಸದ್ದೇ ಮಾಡುವುದಿಲ್ಲ.
ಈ *ಎಲೆ ಮರೆ ಕಾಯಿಯ ಸಮಾಜಮುಖಿ * ಕಾರ್ಯ ಎಗ್ಗಿಲದೆ ಸಾಗಲಿ.

Latest Stories

LEAVE A REPLY

Please enter your comment!
Please enter your name here