27.4 C
Bengaluru
Friday, October 4, 2024

*ಮಂಗಳೂರು ಕಮಿಷನರ್ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ*

Date:


ಮುದ್ದಾದ ಪುಟಾಣಿ ಹೆಣ್ಣು ಮಗುವೊಂದು ಮಂಗಳೂರು ಪೊಲೀಸ್ ಕಮಿಷನರ್ ಸೀಟ್ ನಲ್ಲಿ ಖುಷಿ ಖುಷಿಯಾಗಿ ಕುಳಿತಿದ್ದನ್ನು ಕಣ್ತುಂಬಿ ಕೊಂಡು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಆ ಪುಟಾಣಿಗೆ ತಮ್ಮ ಸೀಟ್ ಬಿಟ್ಟು ಕೊಟ್ಟು ಆ ಹೆಣ್ಣು ಮಗುವಿನ ಪಕ್ಕದಲ್ಲಿಯೇ ನಿಂತು ಕೆಲ ಸಮಯ ಆ ಕ್ಷಣವನ್ನು ಕಣ್ತುಂಬಿ ಕೊಳ್ಳುತ್ತಿದ್ದರು.ಇಂಥದ್ದೊಂದು ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಮಂಗಳೂರು ಪೊಲೀಸ್ ‌ಕಮಿಷನರ್ ಕಚೇರಿ.
ಇದೇನಪ್ಪ ಪೊಲೀಸ್ ಕಮಿಷನರ್ ಸೀಟ್ ನಲ್ಲಿ ಹೆಣ್ಣು ಮಗುವೇ ಎಂದರೆ ಹೌದು
ಮಂಗಳೂರು ಕಮಿಷನರ್ ಕಚೇರಿಗೆ ಆಗಮಿಸಿದ್ದ ಈ ವಿಶೇಷ ಅತಿಥಿಗೆ ಮಂಗಳೂರು ‌ಕಮಿಷನರ್ ಶಶಿಕುಮಾರ್ ತಮ್ಮ ಕುರ್ಚಿ ಬಿಟ್ಟು ಕೊಟ್ಟು ತಮ್ಮ ಅಗಲಿದ ಸಹೋದ್ಯೋಗಿಗೆ ಗೌರವ ನಮನ ಸಲ್ಲಿಸಿದ ಪರಿ ಅದಾಗಿತ್ತು.
ಕಮಿಷನರ್ ತಮ್ಮ ಸೀಟ್ ಬಿಟ್ಟು ಕೊಟ್ಟ ಈ ಪುಟಾಣಿ ಬೇರಾರೂ ಅಲ್ಲ. ರಾಜ್ಯದಲ್ಲಿ ಲೋಕಾಯುಕ್ತ ಎಸ್ಪಿಯಾಗಿದ್ದ ರವಿಕುಮಾರ್ ಪುತ್ರಿ ಪ್ರಣೀತಾ‌. ಮಂಗಳೂರು ಸೇರಿ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸಿದ್ದ ಪೊಲೀಸ್ ಅಧಿಕಾರಿ ರವಿಕುಮಾರ್ ಐದು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮಂಗಳೂರಿನ ಪಣಂಬೂರು ಉಪ ವಿಭಾಗದಲ್ಲಿ 2016-17 ರಲ್ಲಿ ಎಸಿಪಿ ಆಗಿದ್ದ ರವಿ ಕುಮಾರ್ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದರು. 2017 ರ ಫೆಬ್ರವರಿ 22 ರಂದು ಬೆಂಗಳೂರು ಗ್ರಾಮಾಂತರದ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿತ್ತು. ಮಂಗಳೂರು ಎಸಿಪಿ ಆಗಿದ್ದ ರವಿ ಕುಮಾರ್ ಮೈಸೂರಿಗೆ ಲೋಕಾಯುಕ್ತ ಎಸ್ಪಿ ಆಗಿ ಬಡ್ತಿ ಹೊಂದಿ ವರ್ಗಾವಣೆಗೊಂಡಿದ್ದರು. ಹೀಗಾಗಿ ಬೆಂಗಳೂರಿನ ಲೋಕಾಯುಕ್ತ ಕಛೇರಿಯಲ್ಲಿ ಸಭೆಯಲ್ಲಿ ಪಾಲ್ಗೊಂಡು ಮೈಸೂರಿಗೆ ವಾಪಾಸಾಗುವ ವೇಳೆ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಡ್ರೈವರ್ ಹಾಗೂ ಎಸ್ಪಿ ರವಿ ಕುಮಾರ್ ಮೃತಪಟ್ಟಿದ್ದರು. 2008ನೇ ಬ್ಯಾಚ್‌ ನ ಕೆಎಸ್ಪಿಎಸ್ ಅಧಿಕಾರಿಯಾಗಿದ್ದ ರವಿ ಕುಮಾರ್ ಪತ್ನಿ ಮತ್ತು ಪುಟಾಣಿ ಪ್ರಣೀತಾ‌ಳನ್ನು ಅಗಲಿದ್ದರು. ಅಪಘಾತ ಸಂಭವಿಸುವ ಕೆಲವೇ ದಿನಗಳ ಮೊದಲು ಮಗುವಿನ ನಾಮಕರಣ ಮಾಡಿದ್ದು, ಮಗುವಿಗೆ ಪ್ರಣೀತಾ ಅನ್ನೋ ಹೆಸರಿಟ್ಟಿದ್ದರು. ಇಂದು ರವಿ ಕುಮಾರ್ ಅವರ ಪತ್ನಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಗೆ ಆಗಮಿಸಿದ್ದರು. ರವಿಕುಮಾರ್ ರವರ ಪತ್ನಿ ತಮ್ಮ ಮಗಳು ಪ್ರಣೀತಾಗೆ ಆಕೆಯ ತಂದೆ ಕೆಲಸ ಮಾಡಿದ ಸ್ಥಳಗಳನ್ನು ತೋರಿಸುವ ಉದ್ದೇಶದಿಂದ ಕರೆ ತಂದಿದ್ದು,ಈ ವೇಳೆ ರವಿ ಕುಮಾರ್ ಅವರ ಪುತ್ರಿ ಪ್ರಣೀತಾರನ್ನು ತಮ್ಮ ಸೀಟ್ ಮೇಲೆ ಕೂರಿಸಿ ಅಗಲಿದ ರವಿ ಕುಮಾರ್ ಅವರಿಗೆ ಕಮಿಷನರ್ ಶಶಿಕುಮಾರ್ ಗೌರವ ಸಲ್ಲಿಸಿದ್ದಾರೆ. ಮುಂದೆ ಚೆನ್ನಾಗಿ ಕಲಿತು ನಿನ್ನ ತಂದೆಯಂತೆ ಪೊಲೀಸ್ ಹುದ್ದೆ ಯನ್ನೇ ಅಲಂಕರಿಸಬೇಕು ಎಂದು ಹಾರೈಸಿದ್ದಾರೆ.
ವಿಶಾಲ ಹೃದಯದ ಕಮಿಷನರ್ ಶಶಿಕುಮಾರ್ ತಮ್ಮ ಸಹೋದ್ಯೋಗಿಗೆ ಗೌರವ ನಮನ ಸಲ್ಲಿಸಿದ ಪರಿ ಅಮೋಘ ಅವಿಸ್ಮರಣೀಯ.

Latest Stories

LEAVE A REPLY

Please enter your comment!
Please enter your name here