ಮನುಷ್ಯನಿಗೆ ಹೊರಗಣ್ಣಿದ್ದರೆ ಸಾಲದು ಒಳಗಣ್ಣು ಇರಬೇಕು ಎಂಬ ಮಾತಿದೆ, ಹೊರಗಣ್ಣಿಗೆ ಕಾಣದ್ದು ಒಳಗಣ್ಣಿಗೆ ಕಾಣುತ್ತದಂತೆ ಅದೇ ರೀತಿ ಇಲ್ಲೊಬ್ಬರು ಅಧಿಕಾರಿ ತಮ್ಮ ಕಾನೂನು ಸುವ್ಯವಸ್ಥೆಯ ಜವಾಬ್ದಾರಿಯ ಜೊತೆಗೆ ಮಾನವೀಯ ದೃಷ್ಟಿ ಕೋನದ ಜವಾಬ್ದಾರಿಯುತ ವ್ಯಕ್ತಿಯಾಗಿ ತಮ್ಮ ಕಾರ್ಯವನ್ನು ಎಲೆ ಮರೆ ಕಾಯಿಯಂತೆ ನಿಭಾಯಿಸಿದ್ದಾರೆ .
ಈ ಸಾಮಾಜಿಕ ಕಳಕಳಿಯ ಅಧಿಕಾರಿ ಬೇರೆ ಯಾರು ಅಲ್ಲ ಪ್ರಸ್ತುತ ಗ್ರಾಮಾಂತರ ಡಿ ವೈ ಎಸ್ ಪಿ ಆಗಿರುವಂತ ಗೋಪಾಲ್ ನಾಯಕ್ ರವರು.
ಇವರು ಬಸವ ಕಲ್ಯಾಣ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದಾಗ, ಠಾಣೆಯ ಎದುರಿಗಿದ್ದ ಬಸ್ ನಿಲ್ದಾಣದಲ್ಲಿ ಹಲವು ಕಾಲೇಜ್ ಹಾಗೂ ಶಾಲಾ ವಿದ್ಯಾರ್ಥಿಗಳು ಬಸ್ಸಿಗಾಗಿ ಕಾಯುವ ವೇಳೆಯಲ್ಲಿ ನೀರಿಗಾಗಿ ಹುಡುಕುತ್ತ ನೀರಿನ ಬಾಟಲಿ ಗಳನ್ನು ಹಿಡಿದು ಪರದಾಡುತ್ತಿರುವ ದೃಶ್ಯ ಕಂಡು ಬಂದಿತ್ತು.
ಇದನ್ನು ಕಂಡ ಇನ್ಸ್ಪೆಕ್ಟರ್ ವಿಚಾರಿಸಲಾಗಿ ಹಲವು ಹಳ್ಳಿಗಳಿಂದ ವಿದ್ಯಾಭ್ಯಾಸಕ್ಕಾಗಿ ದೂರದ ಊರುಗಳಿಂದ ಬರುವುದಾಗಿಯೂ ಮುಂಜಾನೆ ಮನೆ ಬಿಟ್ಟ ವಿದ್ಯಾರ್ಥಿಗಳು ಊಟ ನೀರಿಗಾಗಿ ಒದ್ದಾಡುವ ವಿಷಯ ತಿಳಿದು ಬಹಳ ನೊಂದುಕೊಳ್ಳುತ್ತಾರೆ.
ಇದಕ್ಕೇನಾದರೂ ವ್ಯವಸ್ಥೆ ಮಾಡಬೇಕೆಂದು ಯೋಚಿಸುತ್ತಾರೆ. ಶಿಕ್ಷಣದ ಹಂಬಲದಿಂದ ಹಲವು ಹಳ್ಳಿಗಾಡುಗಳಿಂದ ಕಿಲೋ ಮೀಟರ್ ಗಟ್ಟಲೆ ಪ್ರಯಾಣ ಮಾಡಿ ಸುಸ್ತಾಗಿರುವ ವಿದ್ಯಾರ್ಥಿಗಳ ಪರಿಸ್ಥಿತಿಯ ಅವಲೋಕನ ನಡೆಸಿದ ಇನ್ಸ್ಪೆಕ್ಟರ್ ಕಾಲೇಜು ಹಾಗೂ ಶಾಲೆ ಮುಗಿಸಿ ಬಸ್ಸಿಗಾಗಿ ಕಾಯುವ ಮಕ್ಕಳಿಗೆ ಕೇವಲ ನೀರಿನ ವ್ಯವಸ್ಥೆಯಲ್ಲ ಊಟದ ವ್ಯವಸ್ಥೆಯನ್ನು ಮಾಡುತ್ತಾರೆ. ಇದರಿಂದ ಮಕ್ಕಳ ಮುಖದಲ್ಲಿ ಎಲ್ಲಿಲ್ಲದ ಹಿಗ್ಗು ಸಂತೋಷ .
ಸಂಜೆ ಮನೆ ತಲುಪುವ ವರೆಗೆ ಉಪವಾಸ ವಿರಬೇಕಾದ ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಿ,ಅವರ ಶಿಕ್ಷಣಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತಾರೆ.
ಜನಸ್ನೇಹಿ ಪೊಲೀಸ್ ಪರಿಚಯ :2003 ರ ಬ್ಯಾಚ್ನ ಅದಿಕಾರಿಯಾದಂತ ಗೋಪಾಲ್ ನಾಯಕ್ ರವರು ಬಡತನದ ಹಸಿವು ನೋವು ದಣಿವು ಅರಿತು ಅನುಭವಿಸಿ ಹಂತ ಹಂತವಾಗಿ ಪರಿಶ್ರಮದಿಂದ ಮೇಲೆ ಬಂದಂತಹ ಅಧಿಕಾರಿ. ಚಿಕ್ಕಂದಿನಿಂದಲೂ ಬಹಳ ಕನಸು ಹೊತ್ತು ಬಡತನದ ನೋವುಂಡು ಸಾಧನೆಯ ಮೆಟ್ಟಿಲೇರಿದ ಅಧಿಕಾರಿ ಗೋಪಾಲ್ ನಾಯಕ್ ರವರು.
ಓದಿಗಾಗಿ ಬಡವರ ಮಕ್ಕಳ ಭವಣೆ ಏನೆಂಬುದನ್ನು ಅರಿತಂತಹ ಅಧಿಕಾರಿ ಇವರು, ವೃತ್ತಿ ತುಡಿತದ ಜೊತೆಗೆ ಜನಪರ ಕಾಳಜಿ ಹೊಂದಿರುವಂತಹ ಗೋಪಾಲನಾಯಕ್ ರವರು ತಮ್ಮ ವೃತ್ತಿ ಆಸಕ್ತಿಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿದ್ದವರು. ಬಡತನದ ಬೇಗೆಯ ನಡುವೆ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಯತ್ನಿಸುತ್ತಿರುವುದರ ಅರಿವನ್ನು ಮನಗಂಡು ಮಕ್ಕಳಿಗೆ ಪ್ರತಿ ನಿತ್ಯ ಊಟದ ವ್ಯವಸ್ಥೆ ಮಾಡಿ ತಮ್ಮ ಸಹಾಯ ಹಸ್ತ ಚಾಚಿದ ಸಮಾಜಮುಖಿ.
ಅಲ್ಲಿಂದ ಬೆಂಗಳೂರಿಗೆ ವರ್ಗಾವಣೆ ಗೊಂಡರು ಮಕ್ಕಳಿಗೆ ಯಾವುದೇ ತೊಂದರೆ ಯಾಗದಂತೆ ಅವರ ಭೋಜನದ ವ್ಯವಸ್ಥೆ ಅವಿರತವಾಗಿ ಸಾಗುವಂತೆ ಇಂದಿಗೂ ನೋಡಿಕೊಳ್ಳುತ್ತಿರುವ ಈ ಧೀಮಂತ ಅಧಿಕಾರಿಯ ಜವಾಬ್ದಾರಿಗೆ ತಲೆಬಾಗಲೇಬೇಕು.
ನಿಮ್ಮ ಈ ಸಮಾಜಮುಖಿ ಕಾರ್ಯ ಹೀಗೆ ಅವಿರತವಾಗಿ ಸಾಗಲಿ ಎಂದು ನಾವು ಆಶಿಸುತ್ತೇವೆ.