ಜನಸ್ನೇಹಿ ಪೊಲೀಸ್ ಠಾಣೆಗಳ ನಿರ್ಮಾಣಕ್ಕಾಗಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ರವರು ಮೊದಲಹೆಜ್ಜೆ ಇಟ್ಟಿದ್ದಾರೆ.
ಸಾಮಾನ್ಯವಾಗಿ ಗ್ರಂಥಾಲಯಗಳು ಶಾಲಾ ಕಾಲೇಜುಗಳಲ್ಲಿ ಕಂಡು ಬರುತ್ತವೆ. ಆದರೆ ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ ಕಂಡು ಬರುವುದು ಬಹಳ ಅಪರೂಪ. ಜನಸಮಾನ್ಯರ ಹಾಗೂ ಪೊಲೀಸರ ನಡುವೆ ಜನಸ್ನೇಹಿಭಾಂದವ್ಯ ರೂಪಿಸುವ ಉದ್ದೇಶದಿಂದ, ಡಿಸಿಪಿ ಬಾಬಾರವರು ವಿನೂತನ ಪ್ರಯತ್ನಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾರೆ . ಸಮಸ್ಯೆಗಳ ಸುಳಿವಿನಲ್ಲಿ ಸಿಕ್ಕು ಪರಿಹಾರ ಅರಸಿ ಬರುವ ಸಾರ್ವಜನಿಕರು ಅಧಿಕಾರಿಗಳ ಭೇಟಿ ವಿಳಂಬವಾದಾಗ ಕಾಯುವ ಬದಲು ಗ್ರಂಥಾಲಯದಲ್ಲಿ ಪುಸ್ತಕ ಓದಬಹುದು. ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವುದರಿಂದ ಜ್ಞಾನ ವೃದ್ಧಿ ಜೊತೆಗೆ ತಾಳ್ಮೆ ಹೆಚ್ಚುತ್ತದೆ. ಅಲ್ಲದೆ ಸಾರ್ವಜನಿಕರ ಸಹ ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದಬಹುದು. ಜೊತೆಗೆ ಇಲಾಖಾ ಸಿಬ್ಬಂದಿ ಸಹ ಬಳಸಬಹುದು. ಇನ್ನೂ ಕಲ್ಕತ್ತಾದಿಂದ ತರಿಸಲಾಗಿರುವ ಕಬಾರ್ಡ್ಗಳನ್ನು ಗ್ರಂಥಾಲಯದಲ್ಲಿ ಅಳವಡಿಸಲಾಗಿದೆ. ಸದ್ಯ ಎರಡು ಸಾವಿರಕ್ಕೂ ಅಧಿಕ ಕನ್ನಡ ಇಂಗ್ಲೀಷ್ ಭಾಷೆಯ ಅನೇಕ ಸಾಹಿತ್ಯ ಗ್ರಂಥಗಳು ಮತ್ತು ನೀತಿ ಪಾಠ, ಸಾಮಾನ್ಯ ಜ್ಞಾನದ ಮಾಹಿತಿ ನೀಡುವ ಪುಸ್ತಕಗಳನ್ನು ಇಡಲಾಗಿದೆ.
ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿರುವ ಆಗ್ನೇಯ ವಿಭಾಗದ ಪೊಲೀಸರು, ಕೆಲ ಠಾಣೆಗಳಲ್ಲಿ ಪ್ರಾಯೋಗಿಕವಾಗಿ ಜನಸ್ನೇಹಿ ಗ್ರಂಥಾಲಯ ತೆರೆದಿದ್ದಾರೆ. ರಾಜ್ಯೋತ್ಸವ ದಿನವಾದ ಮಂಗಳವಾರ ಗ್ರಂಥಾಲಯಗಳನ್ನು ಉದ್ಘಾಟಿಸಿದ ಹಿರಿಯ ನಾಗರಿಕರು, ಜನರ ಉಪಯೋಗಕ್ಕೆ ಮುಕ್ತಗೊಳಿಸಿದ್ದಾರೆ.
ಕೋರಮಂಗಲ, ಮೈಕೊ ಲೇಔಟ್ ಹಾಗೂ ಎಲೆಕ್ಟ್ರಾನಿಕ್ ಸಿಟಿ , ಪರಪ್ಪನ ಅಗ್ರಹಾರ ಠಾಣೆ ಗಳಲ್ಲಿ ಪ್ರತ್ಯೇಕವಾಗಿ ಗ್ರಂಥಾಲಯಗಳನ್ನು ತೆರೆಯಲಾಗಿದೆ. ಕುವೆಂಪು, ದ.ರಾ.ಬೇಂದ್ರೆ, ಚಂದ್ರಶೇಖರ್ ಕಂಬಾರ ಸೇರಿದಂತೆ ವಿವಿಧ ಸಾಹಿತಿಗಳ ಪುಸ್ತಕಗಳು ಹಾಗೂ ದಿನಪತ್ರಿಕೆಗಳು ಗ್ರಂಥಾಲಯದಲ್ಲಿ ಲಭ್ಯವಿರಲಿವೆ. ಠಾಣೆಗೆ ಬರುವ ಪ್ರತಿಯೊಬ್ಬರು ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಪಡೆದುಕೊಂಡು ಓದಲು ಅವಕಾಶ ಇರಲಿದೆ.
‘ಜನರು ಮತ್ತು ಪೊಲೀಸರ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಸಬೇಕಿದೆ. ಸದ್ಯ ಠಾಣೆಗೆ ಬರುವ ಹಲವು ಜನ, ಅನಗತ್ಯವಾಗಿ ಸಮಯ ಕಳೆಯುತ್ತಾರೆ. ಇಂಥವರಲ್ಲಿ ಓದುವ ಹವ್ಯಾಸ ಹೆಚ್ಚಿಸುವುದಕ್ಕಾಗಿ ಠಾಣೆಗಳಲ್ಲಿ ಗ್ರಂಥಾಲಯ ತೆರೆಯಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಹೇಳಿದರು. ಇವರ ವಿನೂತನ ಪ್ರಯತ್ನಕ್ಕೆ ಶುಭವಾಗಲಿ.