ಆಹಾರನಿದ್ರಾ ….ಎಂದು ಶ್ರೀ ಸೀತಾರಾಮದಾಸ ಓಂಕಾರನಾಥರು ‘ಶ್ರೀ ಶ್ರೀ ಪುರುಷೋತ್ತಮ ಲೀಲಾ’ದಲ್ಲಿ ತಿಳಿಸಿದ್ದಾರೆ. ಆಹಾರ, ನಿದ್ರೆ, ಭಯ ಮತ್ತು ಮೈಥುನಗಳು ಮನುಷ್ಯ ಮತ್ತು ಪ್ರಾಣಿಗಳಿಗೆ ಸಮಾನವಾಗಿದೆ. ಪ್ರಾಣಿಗಳಿಗಿಂತ ಮನುಷ್ಯನನ್ನು ಭಿನ್ನವಾಗಿ ನಾವು ಕಾಣುವುದು ಆತನು ಆಚರಿಸುವ ಧರ್ಮದಿಂದಾಗಿ, ಆತ ಮನುಷ್ಯ ಧರ್ಮವನ್ನು ಪಾಲಿಸುತ್ತಾನೆ, ಆದರೆ ಪ್ರಾಣಿಗಳು ಧರ್ಮವನ್ನು ಆಚರಿಸುವುದಿಲ್ಲ. ಧರ್ಮವಿಲ್ಲದ ಮನುಷ್ಯನು, ಪ್ರಾಣಿಗಳಿಗೆ ಸಮಾನವೆನ್ನುತ್ತಾರೆ.
ಪ್ರಾಣಿಗಳು ತಮ್ಮ ಹಸಿವಿಗಾಗಿ ಆಹಾರ ಸೇವಿಸಿದ ನಂತರ ತೃಪ್ತವಾಗುತ್ತವೆ. ನಾಳೆಗಾಗಿ ಆಹಾರ ಸಂಗ್ರಹಿಸುವುದಿಲ್ಲ. ಅವು ಆಹಾರ ತಿಂದೊಡನೆ ನಿದ್ರಿಸಿ ಹಸಿವಾದಾಗ ಏಳುತ್ತವೆ. ಭಯವಾದಾಗ ಅವಿತುಕೊಳ್ಳುತ್ತವೆ. ಅಥವಾ ಓಡುತ್ತವೆ, ಅಥವಾ ಆತ್ಮರಕ್ಷಣೆಗಾಗಿ ಕಾದಾಡುತ್ತವೆ. ಅದೂ ಸಹ ಆ ಕಾಲಕ್ಕೆ ತಮ್ಮನ್ನು ರಕ್ಷಿಸಿಕೊಳ್ಳಲು ಮಾತ್ರ, ಮೈಥುನವೂ ಸಹ ಪ್ರಾಣಿಗಳಲ್ಲಿ ನಿಗದಿತ ಕಾಲಮಾನದಲ್ಲಿ ಮಾತ್ರ ಇದ್ದು ಆ ಬಯಕೆ ಈಡೇರಿದೊಡನೆ ಅಲ್ಲಿಗೆ ಮುಗಿಯಿತು. ಹೆಚ್ಚು ಕಾಲ ಆ ಬಗ್ಗೆ ಚಿಂತಿಸುವುದಿಲ್ಲ. ಇದು ಕೇವಲ ವಂಶಾಭಿವೃದ್ಧಿಗಾಗಿ ನಡೆಯುವ ಕ್ರಿಯೆ ಅಷ್ಟೇ. ಇವುಗಳಿಗೆ ಮುಂದಾಲೋಚಿಸುವ ಶಕ್ತಿ ಯಿಲ್ಲ, ಎಲ್ಲವೂ ಪ್ರವೃತ್ತಿಗಳಾಗಿರುತ್ತವೆ.
ಆದರೆ ಮನುಷ್ಯ ಈ ಎಲ್ಲಾ ಪ್ರವೃತ್ತಿಗಳ ನಡುವೆ ಮುಂದಾಲೋಚಿಸುತ್ತಾನೆ. ಪ್ರತಿಯೊಂದು ಕ್ರಿಯೆಯ ಕಾರ್ಯ ಕಾರಣಗಳನ್ನು ತಿಳಿಯುತ್ತಾನೆ. ಈ ಯೋಚನಾಶಕ್ತಿಯಿಂದಾಗಿಯೇ ಕಾಲಕ್ರಮೇಣ ಈತನ ಪ್ರವೃತ್ತಿಗಳಲ್ಲಿ ಬದಲಾಯಿತು. ಹಸಿವಿನ ಸಮಸ್ಯೆ ಊಟಮಾಡಿದೊಡನೆ ಉಪಶಮನವಾದರೂ ಸಹ, ಮಾನವ ತನ್ನ ಆಲೋಚನಾ ಶಕ್ತಿಯಿಂದಾಗಿ ನಾಳಿನ ಬದುಕಿಗಾಗಿ ಆಹಾರ ಸಂಗ್ರಹಿಸಿದ, ತನ್ನ ಆರೋಗ್ಯಕ್ಕೆ ಅಗತ್ಯವಾದ ನಿದ್ರೆಗೆ ಒಂದು ಸಮಯವನ್ನು ನಿಗದಿಪಡಿಸಿದ. ಕೆಲಸಕ್ಕೆ ಪ್ರತ್ಯೇಕ ಸಮಯವನ್ನು ನಿಗಧಿಪಡಿಸಿದ. ಮೈಥುನಕ್ಕಾಗಿ ಆತನಿಗೆ ನಿಗದಿತ ಸಮಯವಿಲ್ಲ. ತನ್ನ ಯೋಚನಾ ಶಕ್ತಿಯಿಂದಾಗಿ ಈ ಪ್ರವೃತ್ತಿಗಳನ್ನು ಕಾಲಕಾಲಕ್ಕೆ ಅಭಿವೃದ್ಧಿಪಡಿಸಿಕೊಳ್ಳಲು ಹಲವು ಪ್ರಯೋಗಗಳನ್ನು ಮಾಡಿದ. ಮಾನವನು ಮೂಲತ: ಹಲವು ಪ್ರಾಣಿಗಳಿಗಿಂತಲೂ ದೈಹಿಕವಾಗಿ ಕಡಿಮೆ ಶಕ್ತಿಯುಳ್ಳವನು. ಹಾಗಾಗಿ ಈ ಪ್ರಾಣಿಗಳನ್ನು ಎದುರಿಸುವ ಸಲುವಾಗಿ ತಾನು ಒಟ್ಟಾಗಿ ಗುಂಪಾಗಿ ಬದುಕಬೇಕೆಂಬುದನ್ನು ಕಂಡುಕೊಂಡನು. ತಾನು ತನ್ನ ಹೆಂಡತಿ ಮಕ್ಕಳು ಸಂಸಾರಗಳನ್ನು ರಕ್ಷಿಸುತ್ತಾ ಬಂದ ಹೀಗೆ ತನ್ನ ಹಾಗೂ ತನ್ನ ಸಂಸಾರದ ರಕ್ಷಣೆಗೆ ಕುಟುಂಬವೊಂದೇ ಸಾಲದು, ಅದಕ್ಕಿಂತ ದೊಡ್ಡದಾದ ಗುಂಪು ಅಗತ್ಯವಿದೆ ಎಂದು ಅನ್ನಿಸಿತು. ಹೀಗಾಗಿ ಒಂದು ಸಾಮಾಜಿಕ ಗುಂಪನ್ನು ಕಟ್ಟಿಕೊಂಡನು. ಇಲ್ಲಿ ವಾಸಿಸುವ ಜನರು ಕೆಲವು ಉತ್ತಮ ಗುಣಗಳನ್ನು ಹೊಂದಿರಬೇಕಿತ್ತು. ಇವುಗಳಿಗೆ ವಿರುದ್ಧವಾಗಿ ನಡೆದುಕೊಂಡವರನ್ನು ತಮ್ಮ ಗುಂಪಿನಿಂದ ಹೊರಗಿಟ್ಟರು. ಈ ಒಳ್ಳೆಯ ಗುಣ ನಡತೆಗಳ ಸಂಹಿತೆಯೇ ಕಾಲಕ್ರಮೇಣ ಆಯಾ ಕಾಲದ ಕಾನೂನು, ಧರ್ಮಶಾಸ್ತ್ರ ಸಂಹಿತೆಗಳಾದವು.
ಈ ನೀತಿನಿಯಮಗಳನ್ನು ಜನರು ಪಾಲಿಸಬೇಕಿತ್ತು. ಹೀಗೆ ಜನರು ಈ ನೀತಿ ನಿಯಮಗಳನ್ನು ಪಾಲಿಸುತ್ತಿದ್ದಾರೋ? ಇಲ್ಲವೋ? ಎಂಬುದನ್ನು ಗಮನಿಸಲು ಕಾವಲುಗಾರನೊಬ್ಬನ ಅಗತ್ಯತೆ ಇತ್ತು. ಆತನೇ ಪೊಲೀಸ್ ಆಗಿ ಬೆಳೆದುಬಂದ. ಯಾವಾಗಿನಿಂದ ಸಮಾಜದಲ್ಲಿ ಸರಿತಪ್ಪುಗಳ ಪರಿಕಲ್ಪನೆ ಬೆಳೆದು ಬಂತೋ, ಅಂದಿ ನಿಂದಲೂ ಪೊಲೀಸ್ ಕೆಲಸಗಳನ್ನು ಮಾಡುವ ಮಾರ್ಗವೂ ಬೆಳೆದು ಬಂದಿರಬೇಕು. ತಪ್ಪು ಮಾಡಿದವರನ್ನು ಪ್ರಶ್ನಿಸುವ, ತಿದ್ದುವ ಕೆಲಸವನ್ನು ಮಾಡುತ್ತಾ ಬಂತು. ಸಮಾಜಕ್ಕೆ ಯಾವುದು ಸರಿಯಾದ ಮತ್ತು ಯಾವುದು ತಪ್ಪಾದ ದಾರಿ ಎಂದು ಈ ವರ್ಗ ತೋರಿಸುತ್ತಿತ್ತು.”
ಭೂಮಿಯ ಮೇಲೆ ಭಗವಂತನ ಅವತಾರವಾಗಿದ್ದೇ ದುಷ್ಟಶಿಕ್ಷಣೆ ಹಾಗೂ ಶಿಷ್ಟರಕ್ಷಣೆಗಾಗಿ (ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ) ಕ್ರಿಶ್ಚಿಯನ್ ಧರ್ಮದ ಪ್ರಕಾರವೂ ಏಸುಕ್ತಿಸ್ತನನ್ನು ಭಗವಂತನು ಭೂಮಿಗೆ ಕಳುಹಿಸಿದ್ದೆ ಇಲ್ಲಿನ ಜನರ ರಕ್ಷಣೆಗಾಗಿ.
ಪೊಲೀಸ್ ಪದದ ವ್ಯುತ್ಪತ್ತಿ
ಪೊಲೀಸ್ ಎಂಬ ಶಬ್ದದ ವ್ಯುತ್ಪತ್ತಿ ಬಗ್ಗೆ ಕುತೂಹಲವಿದೆ. ಗ್ರೀಕ್ ಭಾಷೆಯ POLIS ಎಂಬ ಶಬ್ದದಿಂದ Police ಎಂಬ ಶಬ್ದವು ವ್ಯುತ್ಪತ್ತಿ ಆಗಿದೆ.’ ಎಂದು ಸಿ.ರೀಶ್ ಅಭಿಪ್ರಾಯಪಡುತ್ತಾರೆ. ಅಂದರೆ ಅದರ ಅರ್ಥ ‘ನಗರ’ (a City) ಎಂದಾಗುತ್ತದೆ. ಆದರೆ ಮೊರೈರ್‌ಟಿಯವರ ಅಭಿಪ್ರಾಯದಂತೆ, ಲ್ಯಾಟಿನ್ ಭಾಷೆಯ POLITIAಎಂಬ ಶಬ್ದದಿಂದ ಇದು ವ್ಯುತ್ಪತ್ತಿ ಆಗಿದೆ. ಇದರ ಅರ್ಥ, ಒಂದು ರಾಜ್ಯದ ಅಥವಾ ಸರಕಾರದ ಸ್ಥಿತಿ.. ಇದು ಪೊಲೀಸ್ ಶಬ್ದದ ಅರ್ಥಕ್ಕೆ ತುಲನಾತ್ಮಕವಾಗಿ ಸಮೀಪವಾಗಿದೆ. ಇದಕ್ಕಿಂತ ಪೂರ್ವದಲ್ಲಿ ಈ ಶಬ್ದಕ್ಕೆ ‘ಆಡಳಿತದ ರೀತಿ’ ಅಥವಾ ‘ನಿಯಂತ್ರಣ’ ಎಂಬ ಅರ್ಥವಿತ್ತು. ಆದರೆ ಈಗ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ, ಅಪರಾಧಗಳ ತಡೆ ಮತ್ತು ಪತ್ತೆ, ಮತ್ತು ಕಾನೂನು ಜಾರಿ ಮಾಡುವ ನಾಗರಿಕ ಅಧಿಕಾರಿಗಳ ಸಂಘಟಿತ ಸಮೂಹವನ್ನು ಪ್ರತಿನಿಧಿಸುತ್ತದೆ.
ಎನ್‌ಸೈಕ್ಲೋಪಿಡಿಯ ಆಫ್ ಬ್ರಿಟಾನಿಕದಲ್ಲಿ POLICE – ಎಂದರೆ ೧)ಸಿವಿಲ್ ಆಡಳಿತ, ಪ್ರಜೆಗಳ ನೆಮ್ಮದಿ ರಕ್ಷಣೆ, ಸಾರ್ವಜನಿಕ ಶಾಂತಿಪಾಲನೆ, ೨) ಸಿವಿಲ್ ಆಡಳಿತ ಇಲಾಖೆ, ಸಾರ್ವಜನಿಕ ನೆಮ್ಮದಿ, ಶಾಂತಿ ರಕ್ಷಣೆಯ ವಿಭಾಗ, ೩) ಪೊಲೀಸು ದಳ, ಕಾವಲು ದಳ, ತಳವಾರಿಕೆ ಎಂದಾಗುತ್ತದೆ. ಮೈಸೂರು ವಿ.ವಿಯ ಇಂಗ್ಲಿಷ್ ಕನ್ನಡ ನಿಘಂಟು, ಏಕೀಕೃತ ಸಂಪುಟ, ಪ್ರಸಾರಂಗ, ಮೈಸೂರು ೨೦೦೭ ರಲ್ಲಿ ಪೊಲೀಸ್ ಎಂದರೆ ಕಾನೂನು ಕಟ್ಟಳೆಗಳನ್ನು ಜಾರಿಗೆ ತರುವ ಅದೇ ರೀತಿಯ ಕರ್ತವ್ಯಗಳನ್ನುಳ್ಳ ದಳ ಎಂದಿದೆ.
ಶಬ್ದಕೋಶಗಳಲ್ಲಿ ವಿವರಿಸಿದಂತೆ POLICE – ಎಂಬ ಶಬ್ದವು ಕ್ರಿಯಾ ಪದವಾಗಿದೆ. ಪೊಲೀಸ್ ದಳದ ಮೂಲಕ ಆಳು, ಅಧೀನದಲ್ಲಿ ಇಟ್ಟುಕೋ, ಪೊಲೀಸ್ ಬಂದೋಬಸ್ತ್ ನ್ನು ಇಡು, ತಳವಾರಿಕೆ ನಡೆಸು, ಏರ್ಪಡಿಸು, ಪೊಲೀಸ್ ಸಿಬ್ಬಂದಿ ಒದಗಿಸು, ನಿಯಂತ್ರಿಸು, ವ್ಯವಸ್ಥೆ ಸ್ಥಾಪಿಸು ಎಂದು ಅರ್ಥವಾಗುತ್ತದೆ. Concise Oxford English dictionary – edited by eatherinesoanes angns Stevenson – Oxford university press, 11th edition 2009 d POLICE od A civil force responsible for the prevention and detection of crime and maintenance of public order- members of such force control and maintain law and order in an area. ವಿವರಿಸಿದೆ.
ಪೊಲೀಸ್ ಎಂಬ ಶಬ್ದವನ್ನು ವಿವರಣಾತ್ಮಕವಾಗಿ ಹೇಳುವುದಾದರೆ ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಗಾಗಿ, ಅಪರಾಧಿಗಳ ಪತ್ತೆ ಮತ್ತು ತಡೆಗಾಗಿ ಹಾಗೂ ಯಾವುದೇ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಸಲುವಾಗಿ ಇರುವ ಒಂದು ಸರಕಾರಿ ಅಂಗ ಎಂದು ತಿಳಿದು ಬರುತ್ತದೆ. ದೇಶದಲ್ಲಿ ಆಂತರಿಕ ಶಾಂತಿಯ ಪರಿಪಾಲನೆ, ಅಪರಾಧಗಳ ನಿವಾರಣೆ ಮತ್ತು ಕಾನೂನು ಚೌಕಟ್ಟಿನಲ್ಲಿ ಸರ್ಕಾರದ ನಿಯಮಗಳನ್ನು ಜಾರಿಗೆ ತರುವ ಮೂಲಕ, ಪ್ರಜೆಗಳ ಹಕ್ಕು ಬಾಧ್ಯತೆಗಳನ್ನು ಕಾಪಾಡಿ ಅವರಿಗೆ ಹಾಗೂ ಅವರ ಆಸ್ತಿಪಾಸ್ತಿಗಳಿಗೆ ರಕ್ಷಣೆ ಒದಗಿಸುವ ಶಾಸನಬದ್ಧ ವ್ಯವಸ್ಥೆ ಪೊಲೀಸ್ (polis). ಅಂದರೆ ಗ್ರೀಕ್ ಭಾಷೆಯಲ್ಲಿ ಗ್ರಾಮರಾಜ್ಯದ ಅಧಿಕಾರ ಕೇಂದ್ರ ಎಂದರ್ಥ. ಇದೇ ಇಂದಿನ ಪೊಲೀಸು ಪದದ ವ್ಯುತ್ಪನ್ನ, ದುಷ್ಟ ಶಿಕ್ಷೆ, ಶಿಷ್ಟ ರಕ್ಷೆ ಪೊಲೀಸು ವ್ಯವಸ್ಥೆಯ ಉದ್ದೇಶ. ಶಿಕ್ಷೆಯ ವಿಧಾನಗಳು ಮಾತ್ರ ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿದೆ.”
ಅನಾದಿ ಕಾಲದಿಂದಲೂ ಪೊಲೀಸರ ಕರ್ತವ್ಯಗಳನ್ನು ಮಾಡುತ್ತಿದ್ದ ವ್ಯವಸ್ಥೆ ಅಥವಾ ಸಂಸ್ಥೆಗಳು ಇದ್ದವು, ಈಜಿಪ್ಟ್, ಗ್ರೀಕ್ ಮತ್ತು ರೋಂ ಕಾನೂನುಗಳಲ್ಲಿ ನಾಗರಿಕರಿಗೆ ತಮ್ಮ ಕಾನೂನುಬದ್ಧವಾದ ಉದ್ಯೋಗಗಳಿಂದ ರಕ್ಷಣೆಯನ್ನು ಒದಗಿಸುತ್ತಿದ್ದ ಮತ್ತು ಶಾಂತಿ ಕಾಪಾಡುತ್ತಿದ್ದ ನಾಗರಿಕ ಸಂಘಟನೆಗಳಿದ್ದವು. ಇವು ಬಹಳ ಪ್ರಾಚೀನವಾಗಿದ್ದು, ಬಹುತೇಕ ಸಾಮ್ಯತೆಯಿಂದ ಕೂಡಿದ್ದವು.
ರೋಮ್‌ನಲ್ಲಿ ಅಗಸ್ಟಸ್‌ನ ಕಾಲದವರೆಗೆ ‘ಪೊಲೀಸ್’ ವ್ಯವಸ್ಥೆ ಪ್ರತ್ಯೇಕವಾದ ವ್ಯವಸ್ಥೆಯಾಗಿ ಬೆಳೆದಿರಲಿಲ್ಲ. ರೋಮ್ ಚಕ್ರಾಧಿಪತ್ಯದ ಪಥನದೊಂದಿಗೆ ‘ಬಾರ್‌ಬರಿಯನ್ ಆಡಳಿತದ ಪರಿಣಾಮದಿಂದಾಗಿ ಪೊಲೀಸ್ ಆಡಳಿತದ ಕುರುಹುಗಳು ಮರೆಯಾದವು. ಯಾವಾಗ ಚಾರ್ಲ್‌ಮ್ಯಾಗ್ನೆ ರೋಮ್‌ನ ಆಡಳಿತಗಾರನಾದನೋ, ಆತ ಪೊಲೀಸ್ ಆಡಳಿತವನ್ನು ಮನರುಜ್ಜಿವನಗೊಳಿಸಿದ. ಹಲವಾರು ಪೊಲೀಸ್ ನಿಯಮಗಳನ್ನು ಅದರಲ್ಲಿ ತೂಕ, ಅಳತೆ, ಗಡಿಸುಂಕ, ಮಾರುಕಟ್ಟೆ, ಆಹಾರ ಧಾನ್ಯಗಳು, ಧಾನ್ಯಗಳ ಮತ್ತು ಜಾನುವಾರುಗಳ ಮಾರಾಟಗಳಲ್ಲಿ ನಿಯಮಗಳನ್ನು ಜಾರಿಗೆ ತಂದನು. ಚಕ್ರವರ್ತಿಯ ಮರಣದಿಂದ ಮನ: ಅರಾಜಕತೆ ಉಂಟಾಯಿತು. ಆದರೆ ಫ್ರಾನ್ಸ್‌ನಲ್ಲಿ ಸಹಜ ಸ್ಥಿತಿ ಬರುತ್ತಿದ್ದಂತೆ ಅತ್ಯಂತ ಗೌರವಯುತವಾದ ಪೊಲೀಸ್ ಕಾಯ್ದೆ (ನಿಯಮ) ಗಳನ್ನು ಜಾರಿಗೆ ತರಲಾಯಿತು. ಈ ವ್ಯವಸ್ಥೆಯನ್ನು ಇಂಗ್ಲೆಂಡ್‌ನಲ್ಲಿ ‘ವಿಲಿಯಂ ದಿ ಕಾಂಕರ ಪರಿಚಯಿಸಿದ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಪ್ರಾರಂಭಿಕ ದಿನಗಳಲ್ಲಿ ಪೊಲೀಸ್ ಕರ್ತವ್ಯಗಳು ಮತ್ತು ಕೆಲಸ ಕಾರ್ಯಗಳು ವಿಶಾಲವಾದ ಗುರಿಗಳನ್ನು ಹೊಂದಿತ್ತು. ಆದ್ದರಿಂದ ಇದು ಸಹಜವಾಗಿ ಪೊಲೀಸ್ ಶಬ್ದವು ನಿಧಾನವಾಗಿ ಮತ್ತು ಅಸ್ಪಷ್ಟವಾಗಿ ರೂಪತಾಳಿತು. ಭಾರತದಲ್ಲಿನ ಪೊಲೀಸ್ ವ್ಯವಸ್ಥೆಯ ಕೆಲವು ಮಾಹಿತಿಗಳು ಮನುವಿನ ಕಾಲದಲ್ಲಿ ಕ್ರಿಸ್ತ ಪೂರ್ವ ೨೦೦೦) ಕಾಣಿಸುತ್ತವೆ. ನಂತರ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ (ಕ್ರಿಸ್ತ ಪೂರ್ವ ೩೦೦) ಅಪರಾಧ ಮತ್ತು ಆಡಳಿತಕ್ಕೆ ಸಂಬಂಧಿಸಿದ ಅತ್ಯಂತ ವಿವರವಾದ ವಿವರಣೆಗಳು ಸಿಗುತ್ತದೆ.
ವೇದಗಳ ಕಾಲದ ರಕ್ಷಣೆಯ ವಿಚಾರಗಳು ಒಂದು ಜನಸಮುದಾಯವು ಒಬ್ಬ ರಾಜನ ಅಡಿಯಲ್ಲಿ ಸಂಘಟಿತವಾಗಿರಬೇಕಾದರೆ ಅವರೆಲ್ಲರನ್ನೂ ನಿಯಂತ್ರಿಸುವ, ಹಿಡಿತದಲ್ಲಿ ಇಟ್ಟುಕೊಳ್ಳುವ ಒಂದು ನೀತಿ ಸಂಹಿತೆಯ ಕಾನೂನಿನ ಅಗತ್ಯವಿತ್ತು. ಈ ಕಾನೂನುಗಳನ್ನು ಅನುಷ್ಠಾನಕ್ಕೆ ತರಲು ಹಾಗೂ ಈ ಕಾನೂನನ್ನು ಮೀರಿ ನಡೆದವರ ವಿರುದ್ಧ ಆಯಾ ಕಾಲದ ದಂಡಸಂಹಿತೆಯಂತೆ ಶಿಕ್ಷಿಸುವ ಪಡೆ ಯೊಂದು ಎಲ್ಲ ಕಾಲದಲ್ಲಿಯೂ ಅಗತ್ಯವಾಗಿ ಬೇಕಿತ್ತು. ಹಾಗೆ ನೋಡಿದಲ್ಲಿ ಮಾನವನು ಎಂದಿನಿಂದ ಗುಂಪಾಗಿ ಬದುಕಲು ಪ್ರಾರಂಭಿಸಿದನೋ ಅಂದಿನಿಂದಲೇ ಕಳ್ಳತನಗಳು ಮೊದಲಾದ ಅಪರಾಧಗಳು ನಡೆಯುತ್ತಾ ಬಂದಿದೆ. ಇಂತಹ ಅಪರಾಧಗಳನ್ನು ತಡೆಯುವ ಮತ್ತು ನಡೆದ ಅಪರಾಧಗಳನ್ನು ಪತ್ತೆಹಚ್ಚುವ ಘಟಕವೊಂದನ್ನು ಎಲ್ಲಾ ರಾಜ ಮಹಾರಾಜರುಗಳು ಹೊಂದಿದ್ದರು. ಇದನ್ನೇ ಆಧುನಿಕ ಭಾಷೆಯಲ್ಲಿ ‘ಪೊಲೀಸ್’ ಎನ್ನಬಹುದು.
ಉಪಲಬ್ಧವಿರುವ ನ್ಯಾಯಶಾಸ್ತ್ರಗಳಲ್ಲಿ ಹಿಂದೂ ನ್ಯಾಯಶಾಸ್ತ್ರವು ಅತ್ಯಂತ ಪ್ರಾಚೀನವಾದುದು. ಇಸ್ಲಾಮಿ ನ್ಯಾಯಶಾಸ್ತ್ರದಂತೆ ಹಿಂದೂ ನ್ಯಾಯವು ಧಾರ್ಮಿಕ ಸಾಹಿತ್ಯದೊಡನೆ ಮಿಶ್ರವಾಗಿಯೇ ಬೆಳೆದುಬಂದಿದೆ. ಸಹಸ್ರಾರು ವರ್ಷಗಳ ಹಿಂದಿನ ವೇದವಾಹ್ಮಯಗಳಲ್ಲಿಯೇ ನ್ಯಾಯಿಕ ತತ್ವಗಳು ರೂಪಗೊಂಡಿವೆ. ವೃತ್ತಿ, ವರ್ಗ, ಜೀವನಗಳಿಗೆ ಸಂಬಂಧಿಸಿದ ನಿಯಮಗಳ ಜೊತೆಗೆ ಸ್ತೇಯ, ಜಾರತನ, ಜೂಜು, ಮೊದಲಾದ ಅಪರಾಧಗಳ ವಿವರಗಳಿವೆ. ಭಾರತದ ಪ್ರಾಚೀನ ಮಹಾಭಾಷ್ಯಕಾರರು, ಯೋಗಸೂತ್ರಕಾರರು ಆದ ಪತಂಜಲಿ ಮಹರ್ಷಿಗಳ ಕಾಲದಲ್ಲಿಯೇ ಧರ್ಮಾಧ್ಯಯನ (law study) ವಿಶೇಷ ಪಾಠಗಳಿದ್ದ ಎಂದು ತಿಳಿದುಬರುತ್ತದೆ. ಧರ್ಮ ಸೂತ್ರ, ಸ್ಮೃತಿಗಳು, ಸಮಾಜದ ಸ್ವಾಸ್ಥ್ಯ ಕಾಪಾಡಲು ರಚನೆಯಾಗಿ ಯಾವ ಕೃತ್ಯಗಳು ಅಪರಾಧಗಳಾಗುತ್ತವೆ, ಅವುಗಳಿಗೆ ಏನು ಶಿಕ್ಷೆ ಎಂಬುದನ್ನು ನಿಗದಿಪಡಿಸಿದವು. ಈ ಅಪರಾಧಗಳನ್ನು ಪತ್ತೆಹಚ್ಚುವ ಅಂಗವು ಸಮಕಾಲಿನವಾಗಿ ಬೆಳೆದುಬಂದಿದೆ.
ಧರ್ಮಶಾಸ್ತ್ರಕಾರರಲ್ಲಿ ಆಪಸ್ತಂಭ, ಗೌತಮ, ಬೋಧಾಯನ, ಹಾರೀತ, ವಶಿಷ್ಟ, ವಿಷ್ಣು ಮೊದಲಾದ ಸೂತ್ರಕಾರರು ಹಾಗೂ ಮನು, ಯಾಜ್ಞವಲ್ಕ, ನಾರದ, ಬೃಹಸ್ಪತಿ, ಕಾತ್ಯಾಯನ, ಪರಾಶರ ಮೊದಲಾದ ಸ್ಮೃತಿಕಾರರು ನೀತಿ ಸಂಹಿತೆಗಳನ್ನು ರಚಿಸಿದರು. ಅಪರಾಧದ ಸ್ವರೂಪ, ಪತ್ತೆಹಚ್ಚುವ ವಿಧಾನ, ಪತ್ತೆಮಾಡುವ ಅಧಿಕಾರಿಗಳ ವಿವರಗಳ ಬಗ್ಗೆ ಕೆಲವು ನೀತಿ ಸಂಹಿತೆಗಳಲ್ಲಿ ಮಾಹಿತಿಗಳಿವೆ. ಇವರ ಸೂತ್ರಗಳು ಇಂದಿನ ಸಮಾಜಕ್ಕೆ ಅನ್ವಯಿಸುವುದಿಲ್ಲವಾದರೂ ಅಂದಿನ ಸಮಾಜ ಅದನ್ನು ಒಪ್ಪಿಕೊಂಡಿತ್ತು.
ವೇದಗಳಲ್ಲಿ ಬರುವ ಗ್ರಾಮಿಣಿ, ಗ್ರಾಮಕೂಟ, ಗ್ರಾಮನೇತೃ, ಗ್ರಾಮಪತಿ, ಗ್ರಾಮಭತ್ಸು, ಗ್ರಾಮಾಧಿಪತಿ, ಗ್ರಾಮಿಕ ಈ ಎಲ್ಲಾ ಶಬ್ದಗಳು ಆ ಕಾಲದಲ್ಲಿ ಗ್ರಾಮದ ರಕ್ಷಣೆಯ ಜವಾಬ್ದಾರಿಯೊಂದಿಗೆ ಇತರ ಕೆಲಸಗಳನ್ನು ಮಾಡುತ್ತಿದ್ದ ಗ್ರಾಮದ ಮುಖ್ಯಸ್ಥನನ್ನು ಸೂಚಿಸುತ್ತವೆ. ಅನೇಕ ಗ್ರಾಮಗಳ ಗುಂಪಾದ ‘ಎಸ್‌ಗೆ’ ವಿಶ್ವತಿಯು ಅನೇಕ ಎಸ್‌ಗಳು ಸೇರಿದ ಪ್ರಾಂತ್ಯಕ್ಕೆ ಗೋಪ ಎಂಬುವವನು ಮುಖ್ಯಾಧಿಕಾರಿಯಾಗಿ ಜನರ ರಕ್ಷಣೆಯನ್ನು ನಡೆಸುತ್ತಿದ್ದ. ವೇದಗಳಲ್ಲಿ ಬಳಕೆಯಾದ ‘ಚೋರಗ್ರಾಹ’ ಮತ್ತು ‘ಚೋರೋದ್ಧರಣಿಕ ಎಂಬ ಪದಗಳು ಅನುಕ್ರಮವಾಗಿ ಕಳ್ಳರನ್ನು ಹಿಡಿಯುವ ಮತ್ತು ಕಳ್ಳಮಾಲಿನ ವ್ಯಾಪಾರಿಗಳನ್ನು ಪತ್ತೆಮಾಡುವ ಅಧಿಕಾರಿ ಎಂಬ ಅರ್ಥವನ್ನು ನೀಡುತ್ತವೆ. ಅಂದರೆ ಈ ಕೆಲಸಗಳು ಸೈನಿಕ ಕರ್ತವ್ಯಗಳಿಗಿಂತ ಭಿನ್ನವಾಗಿವೆ. ದೌಃಸಾಧನಿಕ ಎಂಬ ಶಬ್ದವು ಭಾರಿಕಳ್ಳರು, ದರೋಡೆಕೋರರು ಇವರನ್ನು ಪತ್ತೆಮಾಡಿ ಹಿಡಿಯುವ ದುಸ್ಸಾಧ್ಯವಾದ ಕೆಲಸವನ್ನು ಸಾಧಿಸುವ ಅಧಿಕಾರಿ ಎಂದು ಸೂಚಿಸುತ್ತದೆ. ‘ಪಿಶುನವೇತೃಕ’ ಎಂಬ ಶಬ್ದವು ದುಷ್ಟರನ್ನು ಬೆತ್ತದಿಂದ ಹೊಡೆದೋಡಿಸುವ (ಲಾಠಿಚಾರ್ಜ್) ಅಧಿಕಾರಿ ಎಂಬ ಅರ್ಥ ಬರುತ್ತದೆ. ಈ ಎಲ್ಲಾ ಹೆಸರುಗಳು ನಿರ್ಧಿಷ್ಟವಾಗಿ ಪೊಲೀಸ್ ಕೆಲಸ ಮಾಡುವ ಅಧಿಕಾರಿಯನ್ನೇ ಸೂಚಿಸುತ್ತಿದ್ದವು.
ಹತ್ತುಬಗೆಯ ಅಪರಾಧಗಳನ್ನು ಗುರುತಿಸಿದ್ದು, ಅದರ ಮೇಲೆ ಕಣ್ಣಿಡುವ ಅಧಿಕಾರಿಗೆ ‘ದಶಪರಾಧಿಕ’ ಎಂದು ಕರೆಯಲಾಗಿದೆ. ಈ ಅಪರಾಧಗಳು ಬಹುತೇಕ ಇಂದಿನಭಾರತೀಯ ದಂಡ ಸಂಹಿತೆಯನ್ನು ಹೋಲುತ್ತವೆ. ಅವುಗಳೆಂದರೆ, ರಾಜಾಜ್ಞೆಯ ಉಲ್ಲಂಘನೆ, ಅಪಚಾರ, ಅಶ್ಲೀಲತೆ, ಜಲಪ್ರಯೋಗ, ಗರ್ಭಪಾತಗಳಾಗಿದ್ದವು.
ಸಭಾ ಮತ್ತು ಸಮಿತಿಗಳಿಗಿಂತ ಪ್ರಾಚೀನವಾದ ಹಾಗೂ ಪ್ರಬಲವಾದ ರಾಜಕೀಯ ಸಂಸ್ಥೆ ಎಂದರೆ, ವಿಧಾತ. ಇದೊಂದು ಬುಡಕಟ್ಟು ಸಭೆಯಾಗಿದ್ದು, ಧಾರ್ಮಿಕ, ಸೈನಿಕ ಹಾಗೂ ನಾಗರಿಕ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸಲು ಸ್ಥಾಪನೆಗೊಂಡಿತ್ತು. ಬುಡಕಟ್ಟು ಸಮಾಜವು ವ್ಯವಸ್ಥಿತವಾಗಿ ನಡೆದುಕೊಂಡು ಹೋಗಲು ಅವಶ್ಯವಾದ ಕಾನೂನು ಮತ್ತು ರೀತಿ ನೀತಿಗಳನ್ನು ಈ ಸಭೆಯು ರಚಿಸುತ್ತಿತ್ತು. ವಿಧಾತ ಸಭೆಯು ಸೈನಿಕ ರಕ್ಷಣೆ ನೀಡಲು ಬುಡಕಟ್ಟು ಸೈನ್ಯವನ್ನು ವ್ಯವಸ್ಥೆ ಗೊಳಿಸುತ್ತಿತ್ತು. ಋಗ್ವದದಲ್ಲಿ ವಿಧಾತ ಸಭೆಯು ಬುಡಕಟ್ಟುಗಳನ್ನು ರಕ್ಷಿಸುವುದನ್ನು ಉಲ್ಲೇಖಿಸುತ್ತದೆ..
ಕಳ್ಳತನವು (ಸ್ತೇಯವು) ಮಾನವ ಪ್ರಪಂಚವನ್ನು ಮೊದಲಿನಿಂದಲೂ ಕಾಡಿದ ಪ್ರಶ್ನೆ, ಸಮಾಜವನ್ನು ಸದಾ ಬೆದರಿಸುವ ಒಂದು ಪೆಡಂಭೂತ. ಇದು ಬಹಿರಂಗ ವಾಗಿಯೂ ನಡೆಯಬಹುದು ಅಥವಾ ರಹಸ್ಯವಾಗಿಯೂ ನಡೆಯಬಹುದು. ಕೆಲವು ಸಲ ಸಾಮಾಜಿಕ ಆರ್ಥಿಕ ಅಪರಾಧಗಳ ರೂಪವನ್ನೂ ತಾಳುವುದು, ಕಳ್ಳತನ, ಕುಡಿತ, ಜಾರತನ, ಕಲಬೆರಕೆ, ಕಳ್ಳಸಾಗಾಣಿಕೆ ಇವು ಸದಾ ಸಮಾಜವನ್ನು ಕಾಡಿವೆ, ಕೆಡಿಸಿವೆ. ಋಷಿಮುನಿಗಳನೇಕರು ವೇದಕಾಲದಿಂದಲೂ ಈ ಬಗ್ಗೆ ಎಚ್ಚರಿಸಿದ್ದಾರೆ. ಸರಕಾರದವರು ಸಮಾಜಕಂಟರ (ರೌಡಿಗಳ) ಪಟ್ಟಿಯನ್ನು ತಯಾರಿಸಿ ಅವರನ್ನು ಬೇತಾಳದಂತೆ ಬೆನ್ನುಹತ್ತಿ ಪತ್ತೆಮಾಡಿ, ರಕ್ಷಣಾಧಿಕಾರಿಗಳು (ಪೊಲೀಸ್) ಕೈಕೊಂಡ ಕ್ರಮವು ಮೌರ್ಯ ಸಾಮ್ರಾಜ್ಯದ ಮಹಾ ಮಂತ್ರಾಲೋಚಕನಾಗಿದ್ದ ಕೌಟಿಲ್ಯ ಮಹಾಶಯನು ನಿರೂಪಿಸಿದ ‘ಕಂಟಕ ಶೋಧನ’ ದ ಪ್ರತ್ಯಕ್ಷ ಆಧುನಿಕ ನಿದರ್ಶನವೆಂದು ಹೇಳಬಹುದು.
‘ತಸ್ಕರ’, ‘ಸೇನ’ ಮತ್ತು ‘ತಾಯು’ ಎಂಬ ಶಬ್ದಗಳಿಂದ ಋಗ್ವದವು ಕಳ್ಳರನ್ನು ಸೂಚಿಸಿದೆ. “ನ ತಾ ನ ಶಂತಿ ನ ದಭಾದಿ ತಸ್ಯರೋ ನಾಸಾಮಾಮಿತೋ ವ್ಯಥಿರಾಧಘರ್ಷತಿ ‘ನಮ್ಮ ಹಸುಗಳು ಕಣ್ಮರೆಯಾಗದಿರಲಿ, ಕಳ್ಳರು ಅವುಗಳನ್ನು ಹಿಂಸಿಸದಿರಲಿ’ ಎಂದು ಋಗ್ವದ ಮಂತ್ರವೊಂದು ಸಾರುತ್ತದೆ. ಇರುಳಗಳ್ಳರನ್ನು ‘ತಸ್ಕರ’ರೆಂದು ಕರೆಯುತ್ತಿದ್ದರು. ‘ತಾಯು’ ಎಂಬುದು ಇಂಡೋ ಇರಾನ್ ಮೂಲದ ಪದ ಎಂದು ಶ್ರೀ ಕಾಣೆಯವರು ಹೇಳುತ್ತಾರೆ. ‘ಸೇನ’ ಎಂಬುದು ಋಗ್ರೇದದಲ್ಲಿ ಅನೇಕ ಸಲ ಬಂದಿದೆ. ದನಗಳ್ಳರನ್ನು ‘ಸೇನ’ರೆಂದು ಕರೆಯುತ್ತಿದ್ದರು. ಇಂಥ ‘ಸೇನ’ರನ್ನು ಮತ್ತು ‘ತಸ್ಕರ’ರನ್ನು ನಾಯಿಗಳು ಅಟ್ಟಿಕೊಂಡು ಹೋಗುತ್ತಿದ್ದುವಂತೆ. (ಟಿಪ್ಪಣಿ ನೋಡಿ) ರಹಸ್ಯವಾಗಿ ಕಳ್ಳತನ ಮಾಡುವವರು ‘ಸೇನ’ರು, ಬಹಿರಂಗವಾಗಿ ಮಾಡುವವರು ‘ತಸ್ಕರ’ರು. ‘ಮಲಿನ್ನು’ರೆಂಬ ಮತ್ತೊಂದು ಕಳ್ಳವರ್ಗವಿತ್ತೆಂದು.