ಬಾಡೂಟ ಮಿಸ್ ಆಗುವ ಭಯದಲ್ಲಿ ಭೂಪನೊಬ್ಬ ಪೊಲೀಸರನ್ನೇ ಪೇಚಿಗೆ ಸಿಲುಕಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಹಬ್ಬವೊಂದರ ಬಾಡೂಟ ತಿನ್ನುವ ಆಸೆಗೆ ಭೂಪನೊಬ್ಬ 112 ಪೊಲೀಸರಿಗೆ ಸುಳ್ಳು ಕರೆ ಮಾಡಿದ್ದಾನೆ. ವ್ಯಕ್ತಿಯ ವಿಚಿತ್ರ ಮಾತಿಗೆ ಪೊಲೀಸರೇ ಕೆಲಕಾಲ ಅಚ್ಚರಿಗೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಈ ಘಟನೆ ನಡೆದಿದೆ. ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ಅಶೋಕ್ ಎಂಬುವವರಿಂದ ಪೊಲೀಸರಿಗೆ ಕಳೆದ ದಿನ ರಾತ್ರಿ ಕರೆ ಬಂದಿದೆ. ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಿಂದ ಅಶೋಕ್ ಎಂಬಾತ ಪೊಲೀಸರಿಗೆ ಕರೆ ಮಾಡಿದ್ದನು ಎಂದು ಮಾಹಿತಿ ಲಭಿಸಿದೆ.
112ಗೆ ಕರೆ ಮಾಡಿ ಪೊಲೀಸರೊಂದಿಗೆ ಮಾತನಾಡಿದ ಅಶೋಕ್ ‘ಸರ್ ಇಲ್ಲಿ ಜಗಳ ಆಗ್ತಿದೆ ಬೇಗ ಬನ್ನಿ’ ಎಂದಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರಿಗೆ ವ್ಯಕ್ತಿ ಹೇಳಿದ್ದು ಸುಳ್ಳು ಎಂದು ಅರಿವಾಗಿದೆ. ಬಳಿಕ ಕರೆ ಮಾಡಿ ಸುಳ್ಳು ಮಾಹಿತಿ ನೀಡಿದ ಆರೋಪಿಯನ್ನು ಹಿಡಿದು ವಿಚಾರಿಸಿದ ಪೊಲೀಸರು ಆತನ ಮಾತು ಕೇಳಿ ಶಾಕ್ ಆಗಿದ್ದಾರೆ.
ಪೊಲೀಸರು ವಿಚಾರಿಸಿದಾಗ ಆರೋಪಿ ಅಶೋಕ್, ‘ಪಲ್ಗುಣಿ ಗ್ರಾಮದ ನೆಂಟರ ಮನೆಯಲ್ಲಿ ಹಿರಿಯರ ಹಬ್ಬದ ಊಟ ಇದೆ ಸಾರ್..! ಬಾಡೂಟ ತಿನ್ನಲು ನೆಂಟರ ಮನೆಗೆ ಬಿಟ್ಟು ಬನ್ನಿ ಸಾರ್’ ಎಂದು ಪೊಲೀಸರ ಬಳಿಯೇ ಸಹಾಯ ಕೇಳಿದ್ದಾನೆ. ವ್ಯಕ್ತಿಯ ವಿಚಿತ್ರ ಮಾತಿಗೆ ಪೊಲೀಸರೇ ಕೆಲಕಾಲ ಕಕ್ಕಾ ಬಿಕ್ಕಿಯಾಗಿದ್ದಾರೆ. ಬಳಿಕ ಆತನಿಗೆ ಬುದ್ಧಿವಾದ ಹೇಳಿ ಲಾರಿ ಹತ್ತಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ.