ಬೆಳಗಾವಿ ತಾಲೂಕಿನ ಶಿಂದೊಳ್ಳಿ ಗ್ರಾಮದ ಮಸಣವ್ವ ದೇವಸ್ಥಾನದ ಹಿಂಭಾಗದಲ್ಲಿ ಇರುವ ಬಾವಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಜೊತೆಗೆ ಮಸಣವ್ವ ದೇವಸ್ಥಾನದಲ್ಲಿ ಬೆಳ್ಳಿ ಆಭರಣಗಳೂ ಸಹ ಕಳ್ಳತನವಾಗಿದ್ದು ಹಲವು ಅನುಮಾನ ಹುಟ್ಟುಹಾಕಿದೆ.ಶಿಂದೊಳ್ಳಿ ಗ್ರಾಮದ 48 ವರ್ಷದ (ಭಾರತಿ ಪೂಜಾರಿ) ಮೃತ ಮಹಿಳೆ. ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ತನ್ನ ಮನೆಯ ದನಕರಗಳ ಸಗಣಿ ಎತ್ತಿ ತಿಪ್ಪೆಗೆ ಎಸೆಯಲು ಮಹಿಳೆ ತೆರಳಿದ್ದಳಂತೆ. ಈ ವೇಳೆ ಮನೆಯ ಪಕ್ಕದಲ್ಲಿಯೇ ಇದ್ದ ಮಸಣವ್ವ ದೇಗುಲದಲ್ಲಿನ ಬೆಳ್ಳಿಯ ಆಭರಣ ಕಳ್ಳತನ ಮಾಡುತ್ತಿದ್ದರಂತೆ.
ಸಗಣಿ ಎಸೆದು ಮನೆಗೆ ಬರುವಾಗ ದೇಗುಲ ಕಳ್ಳತನ ಮಾಡ್ತಿದ್ದ ಕಳ್ಳರನ್ನು ಭಾರತಿ ನೋಡಿದ್ದು ಆಗ ಭಾರತಿಯನ್ನು ಹೊತ್ತೊಯ್ದು ದೇಗಲದ ಹಿಂದಿದ್ದ ಬಾವಿಗೆ ಕಳ್ಳರು ಎಸೆದು ಪರಾರಿಯಾಗಿದ್ದಾರೆ ಎಂದು ಮೃತ ಭಾರತಿ ಪೋಷಕರು ಆರೋಪಿಸಿದ್ದಾರೆ.ಗುರುವಾರ ಬೆಳಗಿನ ಜಾವ ಭಾರತಿ ಮನೆಗೆ ಬಾರದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ದೇಗುಲ ಎದುರು ಸಗಣಿ ಬುಟ್ಟಿ, ಬಾವಿ ಎದುರು ಮಹಿಳೆಯ ಚಪ್ಪಳಿ ನೋಡಿರುವ ಕುಟುಂಬಸ್ಥರು ತಕ್ಷಣವೇ ಮಾರಿಹಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಪಾಸಣೆ ವೇಳೆ ಬಾವಿಯಲ್ಲಿ ಭಾರತಿ ಪೂಜಾರಿ ಶವವಾಗಿ ಪತ್ತೆಯಾಗಿದ್ದಾರೆ.ಸ್ಥಳೀಯರೇ ಕಳ್ಳತನ ಮಾಡಿ ಗೊತ್ತಾಗಬಾರದೆಂದು ಈ ಕೃತ್ಯ ಎಸಗಿದ್ದಾರೆಂದು ಭಾರತಿ ಪೋಷಕರು ಆರೋಪಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮಾರಿಹಾಳ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.