ಮೂವರು ಬೈಕ್ ಸವಾರರು ವೀಲಿಂಗ್ ಮಾಡುತ್ತಿದ್ದರು.ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ. ದಬ್ಬಾಳಿಕೆ ಮಾಡಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ದಾಸವಾಳ ಎಂಬ ಗ್ರಾಮದ ಬಳಿ ಈ ಘಟನೆ ನಡೆದಿದೆ.ಇಲ್ಲಿನ ತುಂಗಭದ್ರಾ ಸೇತುವೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಮೂವರು ಬೈಕ್ ಸವಾರರು ವೀಲಿಂಗ್ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಅಡ್ಡ ಹಾಕಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಎಲ್ಲರ ಮುಂದೆಯೇ ಯುವಕರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.
ಪೊಲೀಸರ ಮೇಲೆಯೇ ದಾಳಿ ಮಾಡಿದ ಮೂವರೂ ಆರೋಪಿಗಳನ್ನೂ ಈಗ ಬಂಧಿಸಲಾಗಿದೆ.ಗಂಗಾವತಿ ನಗರದವರಾದ ಅರ್ಭಾಜ್, ಪಂಪನಗೌಡ ಹಾಗೂ ವೆಂಕಟೇಶ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆಯ ಮುಖ್ಯಪೇದೆ ಬಸವರಾಜ, ಚಾಲಕ ಕನಕಪ್ಪ ಅವರೇ ಮೂವರು ಯುವಕರಿಂದ ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ. ಗಂಗಾವತಿ ತಾಲೂಕಿನ ಹೇಮಗುಡ್ಡದ ದುರ್ಗಾದೇವಿ ದಸರಾ ಮಹೋತ್ಸದ ಪಾರ್ಕಿಂಗ್ ವ್ಯವಸ್ಥೆ ಪರಿಶೀಲನೆ ಹೋಗಿದ್ದ ಮುಖ್ಯಪೇದೆ ಬಸವರಾಜು, ಗಂಗಾವತಿಗೆ ವಾಪಸ್ಸಾಗುತ್ತಿದ್ದರು.
ಈ ವೇಳೆ ಯುವಕರು ವೀಲಿಂಗ್ ಮಾಡುತ್ತಿರುವುದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ.ಎಚ್ಚರಿಕೆ ಕೊಟ್ಟಿದ್ದಾರೆ. ಇದರಿಂದ ಕೆರಳಿದ ಯುವಕರು ಪೊಲೀಸರ ಮೇಲೇ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಆರ್‌ಎಕ್ಸ್ ಬೈಕ್‌ನ್ನು ವ್ಹೀಲಿಂಗ್ ಮಾಡಿಕೊಂಡು ಬಂದ ಯುವಕರು ಪೊಲೀಸರ ವಾಹನದ ಬಲ ಭಾಗದಿಂದ ಓವರ್ ಟೇಕ್ ಮಾಡಿದ್ದಾರೆ. ಹೀಗಾಗಿ, ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಬೈಕ್ ಆಯತಪ್ಪಿ ಕೆಳಗೆ ಬಿದ್ದಿದೆ. ಈ ವೇಳೆ ಜಗಳ ನಡೆದು ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ.