ಧೈರ್ಯೇ ಸಾಹಸೇ ಲಕ್ಷ್ಮೀ ಮನುಷ್ಯ ಜೀವನದಲ್ಲಿ ಎದುರಾಗುವ ಸಂಕಷ್ಟಗಳನ್ನು ನಿವಾರಿಸಿಕೊಳ್ಳಲು ಪ್ರಮುಖವಾದದ್ದು ಆತನಲ್ಲಿರುವ ಧೈರ್ಯ ಯಾವುದೇ ಸಂಕಷ್ಟ ಪರಿಸ್ಥಿತಿಯಲ್ಲೂ ದೃತಿಗೆಡದೆ ಧೈರ್ಯದಿಂದ ಅಂತಹ ಸಮಸ್ಯೆ ಯನ್ನು ಎದುರಿಸಲು ನಿಂತರೆ ಆತ ಆ ಸಂಕಷ್ಟದಿಂದ ಪಾರಾಗಬಹುದು ಎಂಬುದಕ್ಕೇ ಉದಾಹರಣೆ ಇತ್ತೀಚೆಗೆ ಮಂಗಳೂರಿನ ಕಿನ್ನಿಗೋಳಿ ಬಳಿ ನಡೆದ ರಸ್ತೆ ಅಪಘಾತ. ಕಿನ್ನಿಗೋಳಿ ಬಳಿ ಟ್ಯೂಷನ್ ಒಂದಕ್ಕೆ ತೆರಳಿದ್ದ ಬಾಲಕಿ ಟ್ಯೂಷನ್ ಮುಗಿಸಿ ತನ್ನ ತಾಯಿಯ ಬರುವಿಕೆಗಾಗಿ ಕಾಯುತ್ತಾ ರಸ್ತೆ ಬದಿಯಲ್ಲಿ ನಿಂತಿರುತ್ತಾಳೆ.
ಆಕೆಯ ತಾಯಿ ರಸ್ತೆ ದಾಟುವ ಧಾವಂತದಲ್ಲಿ ಏಕಾಏಕಿ ಹಿಂದು ಮುಂದು ನೋಡದೆ ರಸ್ತೆ ದಾಟಲು ಮುಂದಾದಾಗ ಆಟೋ ಒಂದರಿಂದ ಅಪಘಾತಕ್ಕೆ ಒಳಪಟ್ಟು ಆಟೋನ ಕೆಳಗೆ ಬೀಳುತ್ತಾಳೆ, ಅಲ್ಲಿಯೇ ಇದ್ದ ಬಾಲಕಿ ತನ್ನ ತಾಯಿ ಆಟೋ ಅಡಿಯಲ್ಲಿ ಸಿಲುಕಿದ್ದನ್ನು ಕಂಡು ಕ್ಷಣ ಮಾತ್ರವೂ ಯೋಚಿಸದೇ ಯಾರ ಸಹಾಯಕ್ಕೂ ಎದುರು ನೋಡದೇ ತನ್ನ ಕೈಯಿಂದ ಆಟೋ ಎತ್ತಲು ಸಾಧ್ಯವೇ ಎಂಬುದನ್ನೂ ಯೋಚಿಸದೇ ತನ್ನ ತಾಯಿಯನ್ನು ಕಾಪಾಡಲು ಆಟೋವನ್ನು ಎತ್ತಲು ಮುಂದಾಗುತ್ತಾಳೆ.
ಬಾಲಕಿಯ ಸಮಯ ಪ್ರಜ್ಞೆ ಹಾಗೂ ಧೈರ್ಯ ಕಂಡು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಬಹು ಪರಾಕ್ ಹೇಳಿದ್ದರು. ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ ವಾಲ್ ಐಪಿಎಸ್) ಅವರು ಬಾಲಕಿಯ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ, ಧೈರ್ಯವಂತ ಬಾಲಕಿಯನ್ನು ತಮ್ಮ ಕಚೇರಿಗೆ ಕರೆಸಿ ಅಧಿಕಾರಿಗಳ ಸಮ್ಮುಖದಲ್ಲಿ ಸನ್ಮಾನಿಸಿದರು.
ಅಪಘಾತದ ಸಂದರ್ಭದಲ್ಲಿ ಧೈರ್ಯದಿಂದ ಸಮಯ ಪ್ರಜ್ಞೆಯಿಂದ ಮಾತ್ರ ಜೀವ ಉಳಿಸಲು ಸಾಧ್ಯ. ಅಪಘಾತವಾದ ಸಂದರ್ಭದಲ್ಲಿ ಪೊಲೀಸರೇ ಬರಲಿ ಆಂಬುಲೆನ್ಸ್ ಬರಲಿ, ಅಥವಾ ನಮಗೇಕೆ ಬೇಕು ಎಂಬ ಮನಸ್ಥಿತಿ ದೂರವಿಟ್ಟು ಅಪಘಾತಕ್ಕೊಳಗಾದ ವ್ಯಕ್ತಿಯ ಜೀವ ರಕ್ಷಣೆಗೆ ಸಾರ್ವಜನಿಕರು ಸಹಾಯ ಮಾಡಬೇಕು ಎಂದು ತಿಳಿಸಿದ್ದಾರೆ.ಈ ಬಾಲಕಿ ಎಲ್ಲರಿಗೂ ಮಾದರಿ ಎಂದು ಮಂಗಳೂರು ಪೊಲೀಸ್ ಆಯುಕ್ತರು ಅನುಪಮ್ ಅಗರ್ ವಾಲ್ ತಿಳಿಸಿದರು.
ಬಾಲಕಿ ವೈಭವಿಗೆ ಪೇಟ, ಹಾರ ತೊಡಿಸಿ, ಫಲಪುಷ್ಪ ಮತ್ತು ಪ್ರಶಂಸನಾ ಪತ್ರ ನೀಡಿ ಆಯುಕ್ತರು ಗೌರವಿಸಿದರು. ಈ ಸಂದರ್ಭ ಡಿಸಿಪಿ ( ಕಾನೂನು ಸುವ್ಯವಸ್ಥೆ) ಸಿದ್ದಾರ್ಥ ಗೋಯೆಲ್ (IPS) , ಡಿಸಿಪಿ ( ಅಪರಾಧ & ಸಂಚಾರ) P B ದಿನೇಶ್ ಕುಮಾರ್, ACP (ಸಂಚಾರ) ನಜ್ಮಾ ಫಾರೂಕಿ, ಪೊಲೀಸ್ ಇನ್ಸ್‌ಪೆಕ್ಟರ್( ಸಂಚಾರ) ಗಳಾದ ಮಹಮ್ಮದ್ ಶರೀಫ್, ಹುಲಗಪ್ಪ D ಅವರುಗಳು, ಬಾಲಕಿಯ ಪೋಷಕರು ಉಪಸ್ಥಿರಿದ್ದರು.
ವರದಿ : ಆಂಟೋನಿ ಬೇಗೂರು