ಸಾಗರ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವಂತ ಟೊಂಕವನ್ನೇ ಅಬಕಾರಿ ಇಲಾಖೆ ಕಟ್ಟಿದೆ ಎನ್ನುವಂತೆ, ಅಕ್ರಮ ಮದ್ಯ ಮಾರಾಟದ ವಿರುದ್ಧ ಸಮರವನ್ನೇ ಇನ್ಸ್ ಪೆಕ್ಟರ್ ಸಾರಿದ್ದಾರೆ. ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ದಾಳಿಯನ್ನು ಮುಂದುವರೆಸಿರುವಂತ ಅವರು, ಬರೋಬ್ಬರಿ 50 ಲೀಟರ್ ಅಕ್ರಮ ಮದ್ಯವನ್ನು ಸೀಜ್ ಮಾಡಿದ್ದಾರೆ.
ಅಕ್ರಮ ಮದ್ಯ ತಡೆಗೆ ಇನ್ಸ್ ಪೆಕ್ಟರ್ ಸಂದೀಪ್ ಸಮರ…..
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಬಕಾರಿ ಇಲಾಖೆಯ ಇನ್ಸ್ ಪೆಕ್ಟರ್ ಸಂದೀಪ್ ಅವರು ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವ ಸಂಬಂಧ ಸಮರವನ್ನ ಮುಂದುವರೆಸಿದ್ದಾರೆ. ಕೆಲ ದಿನಗಳ ಹಿಂದೆ ಮರಸೆ ಗ್ರಾಮದಲ್ಲಿ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವಿಷಯ ತಿಳಿದು, ದಾಳಿ ನಡೆಸಿ, ಎಣ್ಣೆ ಸೀಜ್ ಮಾಡಿದ್ದರು. ಈಗ ತಾಲ್ಲೂಕಿನಲ್ಲಿ ಮತ್ತೊಂದೆಡೆ ದಾಳಿಯನ್ನು ನಡೆಸಿದ್ದಾರೆ.
ಸೋಮವಾರದಂದು ಸಾಗರ ತಾಲ್ಲೂಕಿನ ಸೊರಬ ವಿಧಾನಸಭಾ ಕ್ಷೇತ್ರದ ಆಲಹಳ್ಳಿಯ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಂತ ಖಚಿತ ಮಾಹಿತಿ ಇನ್ಸ್ ಪೆಕ್ಟರ್ ಸಂದೀಪ್ ಅವರಿಗೆ ಸಿಕ್ಕಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದಂತ ಅವರು, ತಮ್ಮ ಟೀಂ ಜೊತೆಗೆ ದಾಳಿಯನ್ನು ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಮನೆಯಲ್ಲಿ ಶೇಖರಿಸಿಟ್ಟಿದ್ದಂತ 8 ಬಾಕ್ಸ್ ವಿಸ್ಕಿ ಜಪ್ತಿ ಮಾಡಿದ್ದಾರೆ.
ಬರೋಬ್ಬರಿ 51.84 ಲೀಟರ್ ಮದ್ಯವನ್ನು ಸೀಜ್ ಮಾಡಿರುವಂತ ಅಬಕಾರಿ ಇಲಾಖೆಯ ಅಧಿಕಾರಿಗಳು, ಈ ಸಂಬಂಧ ಆರೋಪಿಯನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಸಾಗರ ತಾಲ್ಲೂಕು ಅಬಕಾರಿ ಇನ್ಸ್ ಪೆಕ್ಟರ್ ಸಂದೀಪ್ ಅಕ್ರಮ ಮದ್ಯ ಮಾರಾಟಗಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ಈ ವೇಳೆ ಅಬಕಾರಿ ಸಿಬ್ಬಂದಿಗಳಾದಂತ ಅರುಣ್ ಕುಮಾರ್, ಮಹಾಬಲೇಶ್, ಕನ್ನಯ್ಯ, ಚಾಲಕರಾದ ಗಣಪತಿ ಸಾಥ್ ನೀಡಿದ್ದಾರೆ. ಸಾಗರ ತಾಲ್ಲೂಕಿನಲ್ಲಿ ಅಕ್ರಮ ಎಣ್ಣೆ ಮಾರಾಟಗಾರರ ಮೇಲೆ ಹೀಗೆ ದಾಳಿಯನ್ನು ಮುಂದುವರೆಸಿ ಬ್ರೇಕ್ ಹಾಕಲಿ ಎಂಬುದು ತಾಲ್ಲೂಕಿನ ಜನತೆಯ ಮನವಿಯಾಗಿದೆ.
ವರದಿ : ಆಂಟೋನಿ ಬೇಗೂರು