ಕೈ ತೋಟದ ಕೀಟಗಳು
ಬೇಂದ್ರೆಯವರ ಕವಿತೆ
ಪಾತರಗಿತ್ತೀ ಪಕ್ಕಾ ನೋಡೀದೇನ ಅಕ್ಕಾ!ಎಂಬ ಪ್ರಶ್ನೆ ನಮ್ಮ ನಗರ ಪ್ರದೇಶದ ಶಾಲೆಯ ಮಕ್ಕಳಿಗೆ ಕೇಳಿದ ತಕ್ಷಣವೇ ಥಟ್ಟನೆ ಉತ್ತರ ಬರುವುದು ಶಾಲೆಯ ಚಾರ್ಟ್ ನಲ್ಲಿ ಎಂದು ಆ ಉತ್ತರ ಸಹಜವಾಗಿ ಇಂದಿನ ದಿನಗಳಲ್ಲಿ ಬರುವುದೇ ಅಲ್ಲವೇ? ಬಹುಪಾಲು ಪೋಷಕರು ತಮ್ಮ
ಮಕ್ಕಳಿಗೆ ಈ ನೆಲದ ಆಚಾರ, ವಿಚಾರ ,ಸಂಸ್ಕೃತಿಗಳ ಗುಣಗಳನ್ನು ಪರಿಚಯಿಸುವ ಬದಲು ಮಾಲ್ ಗಳನ್ನು ಸುತ್ತಿ
ವಿಡಿಯೋ ಗೇಮ್ ಆಡಿಕೊಂಡು ಬರುವ ಮಕ್ಕಳ ಹತ್ತಿರ ಈ ದಿನಗಳಲ್ಲಿ ಯಾವ ಉತ್ತರ ನಿರೀಕ್ಷಿಸಲು ಸಾಧ್ಯ! ತನ್ನ ನೈಜತೆಯನ್ನು ಕಳೆದುಕೊಳ್ಳುತ್ತ, ಉದ್ಯಾನನಗರಿ ಎಂದು ಜನಗಳ ಬಾಯಲ್ಲಿ ತನ್ನ ಹಸಿರು ಶ್ರೀ ಮಂತಿಕೆಯಿಂದ ಕರೆಸಿಕೊಳ್ಳುತ್ತಿದ್ದ, ಬೆಂಗಳೂರು ಇಂದು ಕಾಂಕ್ರೀಟ್ ನಗರ , ಬಿಸಿಲುನಾಡೆಂದು ತನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತಿದೆ.
ರಸ್ತೆಯಲ್ಲಿ ಓಡಾಡಿದರೆ ತಣ್ಣಗೆ ತಂಗಾಳಿ ಬೀಸವ ಮರಗಳು ನಾವು ಬಿಡುವ ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಶುದ್ದವಾದ ಆಮ್ಲಜನಕ ನೀಡಿ ನಮಗೆ ವರವಾಗಿದ್ದವು. ಅಭಿವೃದ್ಧಿಯ ಹೆಸರಿನಲ್ಲಿ ಅವುಗಳನ್ನು ನಾಶ ಮಾಡುವ ನಾವು ” ಎಲ್ಲಾ ಮಾಯ ನಾಳೆ ನಾವು ಮಾಯ” ಎಂದು ಮುದೊಂದು ದಿನ ಮನುಷ್ಯಕುಲವು ಮಾಯವಾಗುವ ದಿನಗಳು ಹತ್ತಿರದಲ್ಲಿರುವುದು ಎಚ್ಚರಿಕೆಯ ಸಂದೇಶವಾಗಿದೆ. ಮಣ್ಣಿನ ರಸ್ತೆಗಳು ಮರೆಯಾಗಿ ಡಾಂಬರಿನ ರಸ್ತೆಯ ಮರಗಳ ಮಾರಣಹೋಮದ ನಂತರ ಸೂರ್ಯನ ರಣಬಿಸಿಲಿನ ಕಿರಣಗಳು ನಮ್ಮೆಲ್ಲರ ನೆತ್ತಿಯನ್ನು ಸುಡುತ್ತಲಿರುವುದು ವಾಸ್ತವಿಕ ಸಂಗತಿ.”ಎಲ್ಲಿ ಹೋದವೋ ಕಣ್ಣಿಗೆ ಕಾಣದಾದವೋ ಆ ಗಿಡ ಮರ ಬಳ್ಳಿ ಪ್ರಾಣಿ ಪಕ್ಷಿ ಓತಿಕ್ಯಾತ’ ಕವಿಯ ನೋವಿನ ನುಡಿಗಳ ನಡುವೆ ಈ ನಗರಗಳಲ್ಲಿ ಇನ್ನು ಬಣ್ಣ ಬಣ್ಣದ ಪತಂಗಗಳು,ಜೀರ್ಜಿಂಬೆ,ಏರೋಪ್ಲೇನ್ ಚಿಟ್ಟೆ,ಗೆದ್ದಲು, ಜೇನುನೊಣಗಳ ಕಲರವ ಎಲ್ಲಿ ನೋಡಬೇಕು?ಕೇಳಬೇಕು?
ಪ್ರಕೃತಿಯನ್ನು ಮರೆತು ವಿಲಾಸಿ ಜೀವನದಲ್ಲಿ ತೇಲಾಡುವ ಜನರ ನಡುವೆ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಹತ್ತನೇ ತರಗತಿ ಓದುತ್ತಿರುವ ಕುಮಾರಿ ಧಾರಿಣಿ ಎಂಬ ವಿದ್ಯಾರ್ಥಿನಿ ತನ್ನ ಮನೆಯ ಮುಂದೆ ಕೈ ತೋಟ ನಿರ್ಮಿಸಿ ಸುಮಾರು ಇನ್ನೂರ ಇಪ್ಪತ್ತು ಕೀಟಗಳ ಪ್ರಭೇದಗಳನ್ನು ನಮಗೆ ಪರಿಚಯಿಸುವ ಮೂಲಕ ತನ್ನ ಪರಿಸರ ಪ್ರಜ್ಞೆಯನ್ನು ಮೆರೆದಿರುವುದು ಸಂತಸದ ಸಂಗತಿಯಾಗಿದೆ.
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 2019 ರಲ್ಲಿ ಆಯೋಜಿಸಿದ್ದ ಕೀಟ ವಿಸ್ಮಯ ಕಾರ್ಯಕ್ರಮಕ್ಕೆ ಭೇಟಿ ನೀಡಿದಾಗ ಆ ಕಾರ್ಯಕ್ರಮವನ್ನು ಕುತೂಹಲದಿಂದ ವೀಕ್ಷಸಿದ ಪ್ರಕೃತಿಯ ವಿಸ್ಮಯಕ್ಕೆ ಮನಸೋತ ಧಾರಿಣಿ ಕೀಟಗಳ ಜೀವನ ಚರಿತ್ರೆಯನ್ನು ಕಂಡು ಆಶ್ಚರ್ಯಪಡುತ್ತ ತನ್ನ ಗಮನವನ್ನು ಕೀಟಗಳ ಅಧ್ಯಯನದತ್ತ ಕೇಂದ್ರಿಕರಿಸುತ್ತಾಳೆ. ಆಗಾಗ ತನ್ನ ಪೋಷಕರ ಹುಟ್ಟೂರು ಹಳ್ಳಿಗಳಿಗೆ ಬೇಟಿ ನೀಡಿದಾಗ ಅಲ್ಲಿನ ಸುತ್ತಮುತ್ತಲಿನ ಪರಿಸರಕ್ಕೆ ಮನಸೋತು ಹಳ್ಳಿಗಳು ಈ ದೇಶದ ಸಂಪತ್ತು ರೈತರು ಈ ದೇಶದ ಬೆನ್ನೆಲುಬು ಎನ್ನುವ ಈಕೆ ತನ್ನ ಸೋದರ ಮಾವನವರಾದ ಮೋಹನ್ ಕುಮಾರ್, ಕೃಷಿ ಪದವೀಧರರು ಮತ್ತು ಮಂಜುನಾಥ್ , ಕೃಷಿಕರು ಈ ಇಬ್ಬರ ಸಹಕಾರದೊಂದಿಗೆ ತಾನು ವಾಸವಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಮನೆಯ ಮುಂದೆ ಕೈ ತೋಟ ನಿರ್ಮಿಸಲು ಮುಂದಾಗುತ್ತಾಳೆ.
ಅಂದುಕೊಂಡಂತೆ ತೋಟವನ್ನು ಸಹ ಮಾಡಲಾಗುತ್ತದೆ.ಹೂವಿನ ಗಿಡ,ಹಣ್ಣುಗಳ ಸಸಿಗಳನ್ನು ನೆಡುತ್ತ ತರಕಾರಿಗಳ ಬಳ್ಳಿಗಳನ್ನು ಬೆಳೆಸುತ್ತಿದ್ದಂತೆ ತೋಟವು ಸೌಂದರ್ಯದ ರೂಪ ಪಡೆದುಕೊಳ್ಳತ್ತದೆ.
ಇವರ ತಾಯಿಗೆ ಬಾಲ್ಯದಿಂದಲೂ ಪ್ರಕೃತಿ ವಿಸ್ಮಯಗಳನ್ನು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿಯುವ ಹವ್ಯಾಸ ಇದ್ದುದರಿಂದ ಸಹಜವಾಗಿ ಮಗಳಿಗೆ ಕ್ಯಾಮರಾದಲ್ಲಿ ಚಿತ್ರಗಳನ್ನು ಸೆರೆಹಿಡಿಯುವ ತಂತ್ರಗಳನ್ನು ತಿಳಿಸಿದ್ದರು. ಈ ತಂತ್ರಗಳನ್ನು ತಿಳಿದಿದ್ದ ಧಾರಿಣಿ
ಒಂದೊಂದಾಗಿ ತಮ್ಮ ಕೈ ತೋಟಕ್ಕೆ ಬರುವ ಅತಿಥಿಗಳ ಚಿತ್ರಗಳನ್ನು ತನ್ನ ಕ್ಯಾಮರಾದಲ್ಲಿ ದಾಖಲು ಮಾಡಲು ಶುರುವಿಟ್ಟುಕೊಂಡಳು.
ಕೇವಲ ಚಿತ್ರ ತೆಗೆಯುವುದಲ್ಲ ಕ್ಯಾಮೆರ ಲೆನ್ಸ್ ಕ್ಲಿಕ್ಕಿಸಿದ ಆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪರಿಸರದ ಗುಂಪುಗಳಿಗೆ ಆ ಚಿತ್ರವನ್ನು ರವಾನಿಸುತ್ತ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪರಿಸರ ಪ್ರಿಯರಿಂದ ಸಂಗ್ರಹಿಸಿಕೊಳ್ಳುತ್ತಿದ್ದಳು.
ಈ ರೀತಿ ಮಾಹಿತಿ ಪಡೆದು ಸುಮ್ಮನೆ ಕೂರಲಿಲ್ಲ “ಧಾರಿಣಿ ವರ್ಡ್ ಆಫ್ ಇನ್ಸೆಕ್ಟ್ಸ್” ಎಂಬ ಪುಸ್ತಕವನ್ನು ಸಹ ಬರೆದಿದ್ದಾಳೆ. ವಿಜಯನಗರದ
ಉನ್ನತಿ ಪ್ರಕಾಶನ ಸಂಸ್ಥೆ ಇದನ್ನು ಪ್ರಕಟಿಸಿದ್ದಾರೆ.
ಕೇವಲ ಇದನ್ನು ನನಗೆ ಮಾತ್ರ ಸೀಮಿತಗೊಳಿಸಿಕೊಂಡರೆ ಸಾಲುವುದಿಲ್ಲ,ಕೇವಲ ಒಂದು ಸಣ್ಣ ಕೈ ತೋಟದಲ್ಲಿ ಕೀಟ ವಿಸ್ಮಯ ಪ್ರಪಂಚ ಎಷ್ಟು ಆಶ್ಚರ್ಯಕರವಾಗಿದೆ ಎನ್ನುತ್ತ ಕಿರಿಯ ವಿದ್ಯಾರ್ಥಿಗಳಿಗೆ, ತನ್ನ ಸಹಪಾಠಿಗಳಿಗೆ,ಸ್ನೇಹಿತರಿಗೆ,ಯುವ ಜನಾಂಗಕ್ಕೆ ಈ ವಿಷಯವನ್ನು ಪಸರಿಸಬೇಕು ಎಂಬ ಉದ್ದೇಶದಿಂದ ತಮ್ಮ ಬಿಡುವಿನ ಸಮಯದಲ್ಲಿ ಮಾಹಿತಿಯನ್ನು ಸರ್ಕಾರಿ ಶಾಲೆ ಮಕ್ಕಳೊಂದಿಗೆ ಸಂವಹನ ನಡೆಸುತ್ತ ಕೀಟಗಳ ಪ್ರಪಂಚವನ್ನು ಎಲ್ಲರಿಗೂ ಪರಿಚಯ ಮಾಡಿಕೊಡುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾಳೆ.
ಇದುವರೆಗೆ ಇವರ ಕೈ ತೋಟಕ್ಕೆ ಬಂದಿರುವ ಕೀಟಗಳನ್ನು ದಾಖಲಿಸಿರುವ ಪಟ್ಟಿ ಈ ರೀತಿ ಇವೆ
53- ರೀತಿಯ ಚಿಟ್ಟೆಗಳು
60- ಜಾತಿಯ ಪತಂಗ
33 -ರೀತಿಯ ಜಾಡಗಳು
14-ರೀತಿಯ ನೊಣಗಳು
26- ರೀತಿಯ ಸಣ್ಣ ಕೀಟಗಳು
25-ರೀತಿಯ ಹುಳಗಳು
11- ರೀತಿಯ ಹುಳಗಳು
6- ರೀತಿಯ ಇರುವೆಗಳನ್ನು
ಒಟ್ಟು 220 ರೀತಿಯ ವಿವಿಧ ಕೀಟಗಳನ್ನು ತಮ್ಮ ಪುಸ್ತಕದ ಪುಟಗಳಲ್ಲಿ ದಾಖಲಿಸಿದ್ದಾರೆ.
ಕೀಟಗಳ ಇರುವಿಕೆ ಪ್ರಕೃತಿಯ ಸಮತೋಲನದ ಮೇಲೆ ಎಷ್ಟು ಅವಶ್ಯಕತೆ ಇದೆ ಎನ್ನುವುದನ್ನು ನಾಗರೀಕರು ಅರ್ಥಮಾಡಿಕೊಳ್ಳಬೇಕು ಎಂದು ಹೇಳುವ ಧಾರಿಣಿ ಮನೆಯ ಕೈ ತೋಟದಲ್ಲಿ ಎಷ್ಟು ವಿಸ್ಮಯವಿದೆ ಎನ್ನುವುದಾದರೆ ಇನ್ನು ಪ್ರಕೃತಿಯಲ್ಲಿ ಕೀಟಗಳ ಪ್ರಪಂಚದಲ್ಲಿ ವಿಸ್ಮಯ ಎಷ್ಟಿರಬೇಕೆಂದು ಮಂದಹಾಸ ಬೀರುತ್ತ ತಮ್ಮ ಕೀಟಗಳ ಜಗತ್ತನ್ನು ಇತರರಿಗೆ ಪರಿಚಯ ಮಾಡುವ ಉತ್ಸಾಹದಲ್ಲಿದ್ದಾರೆ ಇವರ ಮಹತ್ವಾಕಾಂಕ್ಷೆಗಳಿಗೆ ಪರಿಸರ ಪ್ರೇಮಿಗಳು,ಪರಿಸರವಾದಿಗಳು
ಶಿವರಾಮಕಾರಂತರ,ತೇಜಸ್ವಿಯವರ ಬರವಣಿಗೆಗಳು ಸ್ಪೂರ್ತಿ ಎನ್ನುತ್ತಾರೆ ಧಾರಿಣಿ. ಸಾರ್ವಜನಿಕರು ಸಹ ತಾವು ಪ್ರಕೃತಿಯ ಅವಿಭಾಜ್ಯ ಅಂಗ ಎಂದು ಭಾವಿಸಿ, ಪರಿಸರ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕು.ಪ್ರಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದು ಅರಿವಾಗಬೇಕು ಆಗ ಮಾತ್ರ ಪರಿಸರ ಮತ್ತು ಮಾನವ ಸಂಘರ್ಷ ಕಮ್ಮಿಯಾಗಬಹುದೆಂದು ಹೇಳುವ ಧಾರಿಣಿ ತಮ್ಮ ಬಿಡುವಿನ ಸಮಯದಲ್ಲಿ ಕೀಟಗಳ ಜೀವನ ಚಕ್ರದ ಮಾಹಿತಿಯನ್ನು ಸಂಗ್ರಹಿಸಿ ಎಲ್ಲರಿಗೂ ಒದಗಿಸಲು ಉತ್ಸುಕರಾಗಿದ್ದಾರೆ.
ಸಯ್ಯದ್ ಯೇಜಸ್ ಪಾಷ