28.7 C
Bengaluru
Tuesday, October 8, 2024

ದೇವರ ಆಭರಣಕ್ಕೂ ಕನ್ನ ಮಹಾಕಾಳಿಗೂ ಹೆದರದ ಅರ್ಚಕ…

Date:

ಕುಂದಾಪುರದ ಗಂಗೊಳ್ಳಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ದೇವಿಗೆ ಹರಕೆ ರೂಪದಲ್ಲಿ ಅರ್ಪಿಸಿದ್ದ ಒಟ್ಟು 21 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅರ್ಚಕನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.ಶಿರಸಿ ಸಾಲಕಣಿ ಗ್ರಾಮದ ಮೂರೆಗಾರ ಎಂಬಲ್ಲಿನ ನರಸಿಂಹ ಭಟ್‌ (43) ಬಂಧಿತ ಆರೋಪಿಯಾಗಿದ್ದು, ಈತ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಅರ್ಚಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇವೆ, ಹರಕೆ ರೂಪದಲ್ಲಿ ನೀಡಿದ ಚಿನ್ನಾಭರಣಗಳು ಅಲಂಕಾರ ಮಾಡಿದ ರೀತಿಯಲ್ಲಿ ಪ್ರತಿದಿನ ದೇವರ ಮೂರ್ತಿಯ ಮೈಮೇಲೆ ಇರುತ್ತಿತ್ತು. ಸೆ. 21ರಂದು ಸಂಜೆ 7 ಗಂಟೆ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಆರೋಪಿ ಅರ್ಚಕ ನರಸಿಂಹ ಭಟ್ ನಲ್ಲಿ ನವರಾತ್ರಿ ಉತ್ಸವದ ಸಲುವಾಗಿ ದೇವರ ಮೈಮೇಲಿದ್ದ ಚಿನ್ನಾಭರಣಗಳನ್ನು ಶುದ್ಧಾಚಾರ ಮಾಡಲು ನೀಡುವಂತೆ ಹೇಳಿ ಪಡೆಯಲಾಗಿತ್ತು.

ಈ ವೇಳೆ ಆ ಆಭರಣಗಳ ವಿನ್ಯಾಸದಲ್ಲಿ ಬದಲಾವಣೆ ಹಾಗೂ ಅಸಲಿ ಚಿನ್ನದಂತೆ ಅದು ಕಂಡುಬಂದಿಲ್ಲ. ಈ ಬಗ್ಗೆ ದೇವಸ್ಥಾನದ ಆಡಳಿತ ಸಮಿತಿಯವರಿಗೆ ಶಂಕೆ ವ್ಯಕ್ತವಾಗಿ ಅರ್ಚಕನನ್ನು ತೀವ್ರವಾಗಿ ವಿಚಾರಿಸಿದಾಗ ಅಸಲಿ ಚಿನ್ನಾಭರಣಗಳನ್ನು ತಾನು ತೆಗೆದಿರುವುದಾಗಿ ಒಪ್ಪಿಕೊಂಡಿದ್ದು, ಅವುಗಳನ್ನು ತಾನು ವೈಯುಕ್ತಿಕವಾಗಿ ಬಳಸಿಕೊಂಡಿರುವುದಾಗಿ ತಿಳಿಸಿದ್ದಾನೆ.

ಅಂದಾಜು 3.20 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನದ ಜೋಬಿನ ಸರ, 5.84 ಲಕ್ಷ ರೂ. ಮೌಲ್ಯದ 73 ಗ್ರಾಂ ತೂಕದ ಹವಳ ಸೇರಿದ ಚಿನ್ನದ ಕಾಸಿ ತಾಳಿ ಸರ, 5.84 ಲಕ್ಷ ರೂ. ಮೌಲ್ಯದ 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 5.12 ಲಕ್ಷ ರೂ. ಮೌಲ್ಯದ 64 ಗ್ರಾಂ ತೂಕದ ಚಿನ್ನದ ನಕ್ಲೇಸ್, 48 ಸಾವಿರ ರೂ. ಮೌಲ್ಯದ 6 ಗ್ರಾಂ ತೂಕದ 3 ಚಿನ್ನದ ತಾಳಿ, 64 ಸಾವಿರ ರೂ. ಮೌಲ್ಯದ 8 ಗ್ರಾಂ ತೂಕದ ಚಿನ್ನದ ಚೈನ್ ಸರ ಸಹಿತ ಒಟ್ಟು 21.12 ಲಕ್ಷ ರೂ. ಮೌಲ್ಯದ 264 ಗ್ರಾಂ (33 ಪವನ್) ತೂಕದ ಚಿನ್ನಾಭರಣಗಳನ್ನು ಕಳವುಗೈದಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

Latest Stories

LEAVE A REPLY

Please enter your comment!
Please enter your name here