ಯುವತಿಯೊಬ್ಬಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದಳು.ಅದರ ತರಬೇತಿಗೆಂದು ಆಕೆ ದೆಹಲಿಗೆ ಬಂದು ಫ್ಲಾಟ್ ಒಂದನ್ನು ಬಾಡಿಗೆ ಪಡೆದಿದ್ದಳು.ಒಂದು ದಿನ ತನ್ನ ವಾಟ್ಸಾಪ್ ಅನ್ನು ಯಾರೋ ಬಳಸುತ್ತಿರುವುದು ಕಂಡುಬಂದಿದೆ. ನೋಡಿದರೆ ಯಾರೋ ಲ್ಯಾಪ್‌ಟಾಪ್‌ನಲ್ಲಿ ತನ್ನ ವಾಟ್ಸ್ ಆಪ್ ಲಾಗಿನ್ ಆಗಿದ್ದರು. ಇದರಿಂದಾಗಿ ಆಕೆ ಕೂಡಲೇ ಅದನ್ನು ಲಾಗ್‌ಔಟ್ ಮಾಡಿದ್ದಾಳೆ. ಅನಂತರ ತನ್ನ ಫ್ಲಾಟ್ ಪರಿಶೀಲನೆ ಮಾಡಿದಾಗ, ಬೆಡ್‌ರೂಮ್ ವಿದ್ಯುತ್ ಬಲ್ಬ್ ಹೋಲ್ಡರ್, ಬಾತ್ ರೂಮ್ ಸೇರಿದಂತೆ ಹಲವು ಕಡೆ ಹಿಡನ್ ಕ್ಯಾಮರಾ ಅಳವಡಿಸಿರುವುದು ಗೊತ್ತಾಗಿ ಆಕೆ ಶಾಕ್‌ಗೆ ಒಳಗಾಗಿದ್ದಾಳೆ.
ಕೂಡಲೇ ಯುವತಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾಳೆ.ಪೊಲೀಸರು ಹುಡುಕಾಟ ನಡೆಸಿದಾಗ ಮನೆಯ ಬೆಡ್‌ರೂಮ್, ಬಾತ್ ರೂಮ್ ಸೇರಿದಂತೆ ಹಲವು ಕಡೆ ಹಿಡನ್ ಕ್ಯಾಮರಾ ಅಳವಡಿಸಿರುವುದು ಗೊತ್ತಾಗಿದೆ. ಮನೆ ಮಾಲೀಕನ ಮಗ ಕರಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತನೇ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ.ಯುವತಿ ಉತ್ತರ ಪ್ರದೇಶ ಮೂಲದವಳು.
ಮೂರು ತಿಂಗಳ ಹಿಂದೆ ತವರಿಗೆ ಹೋಗಿದ್ದಳು. ಈ ವೇಳೆ ಅದೇ ಅಪಾರ್ಟ್‌ಮೆಂಟ್‌ನ ಮತ್ತೊಂದು ಫ್ಲಾಟ್‌ನಲ್ಲಿದ್ದ ಮಾಲೀಕರಿಗೆ ಕೀ ಕೊಟ್ಟಿದ್ದಳು. ಇದನ್ನು ಬಳಸಿರುವ ಮಾಲೀಕನ ಮಗ ಕರಣ್, ಮೂರು ರಹಸ್ಯ ಕ್ಯಾಮರಾಗಳನ್ನು ತಂದು ಬೆಡ್ ರೂಮ್, ಬಾತ್ ರೂಮ್ ಮುಂತಾದ ಕಡೆ ಅಳವಡಿಸಿದ್ದ.ಆದ್ರೆ ಅದನ್ನು ವೈಫೈ ಮೂಲಕ ಸಂಪರ್ಕ ಪಡೆಯುವುದಕ್ಕೆ ಆಗುತ್ತಿರಲಿಲ್ಲ.
ಕ್ಯಾಮರಾದಲ್ಲಿರುವ ಮೆಮೊರಿ ಕಾರ್ಡ್‌ನಲ್ಲಿ ವಿಡಿಯೋ ರೆಕಾರ್ಡ್ ಆಗುತ್ತಿತ್ತು. ಹೀಗಾಗಿ ಯುವತಿ ತರಬೇತಿಗೆಂದು ಹೋಗುವಾಗ ಎಲೆಕ್ಟ್ರಿಕ್ ಕೆಲಸ ಇದೆ ಎಂದು ಕೀ ಪಡೆದುಕೊಂಡು ಕ್ಯಾಮರಾದ ಮೆಮೊರಿ ಕಾರ್ಡ್‌ನಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋಗಳನ್ನು ಲ್ಯಾಪ್‌ಟಾಪ್‌ಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ. ಬಳಿಕ ಮೆಮೊರಿ ಕಾರ್ಡ್ ಅಲ್ಲೇ ಇಡುತ್ತಿದ್ದ ಎಂದು ತಿಳಿದುಬಂದಿದೆ.