ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್ ಕಮ್ಯುನಿಕೇಷನ್ ಇಂಡಿಯಾ ಮತ್ತು ಇತರ ಕೆಲವು ಡಿಜಿಟಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನ್ಯಾಯಾಲಯದ ಪ್ರಕ್ರಿಯೆಗಳ ನೇರ ಪ್ರಸಾರವನ್ನು ಹಂಚಿಕೊಳ್ಳದಂತೆ ಕರ್ನಾಟಕ ಹೈಕೋರ್ಟ್ ನಿರ್ಬಂಧಿಸಿದೆ.2021 ರ ಲೈವ್ ಸ್ಟ್ರೀಮಿಂಗ್ ಮತ್ತು ರೆಕಾರ್ಡಿಂಗ್ ಕುರಿತ ಕರ್ನಾಟಕ ನಿಯಮಗಳ 10 ನೇ ನಿಯಮ ಉಲ್ಲಂಘಿಸಿ ಪೋಸ್ಟ್ ಮಾಡಲಾದ ಆಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡಲಾದ ಎಲ್ಲಾ ಲೈವ್ ಸ್ಟ್ರೀಮ್ ವೀಡಿಯೊಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಳಿಸಲು ನ್ಯಾಯಾಲಯ ನಿರ್ದೇಶಿಸಿದೆ.
ಡಿಜಿಟಲ್ ಮಾಧ್ಯಮ ವೇದಿಕೆಗಳಾದ ಕಹಳೆ ನ್ಯೂಸ್, ಫ್ಯಾನ್ಸ್ ಟ್ರೋಲ್, ಪ್ರತಿಧ್ವನಿ, ಅವನಿಯಾನ ಮತ್ತು ರವೀಂದ್ರ ಜೋಶಿ ಕ್ರಿಯೇಷನ್ಸ್ ಗೆ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರು ಈ ಆದೇಶ ನೀಡಿ, ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೆ ತುರ್ತು ನೋಟಿಸ್ ಜಾರಿ ಮಾಡಿದರು.
ಬೆಂಗಳೂರಿನ ವಕೀಲರ ಸಂಘ ಸಲ್ಲಿಸಿದ್ದ ಅರ್ಜಿಗೆ ಮಂಗಳವಾರ ಮಧ್ಯಂತರ ಆದೇಶ ನೀಡಿದ ಕೋರ್ಟ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ರಾಜ್ಯ ಸರ್ಕಾರ, ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಮತ್ತು ಡಿಜಿ ಮತ್ತು ಐಜಿಪಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.ವಾಣಿಜ್ಯ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಲೈವ್ ಸ್ಟ್ರೀಮ್ ಮಾಡಿದ ನ್ಯಾಯಾಲಯದ ಪ್ರಕ್ರಿಯೆಗಳನ್ನು ದುರುಪಯೋಗಪಡಿಸಿಕೊಳ್ಳುವ ಹೊಸ ಪ್ರವೃತ್ತಿಯು ಅತಿರೇಕವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ವಿಚಾರಣೆಯ ಸಣ್ಣ ತುಣುಕುಗಳು ಭಾಗಶಃ ಮಾಹಿತಿಯನ್ನು ನೀಡುವುದರಿಂದ ಇದು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ. ಇದರಿಂದ ನ್ಯಾಯಾಂಗದ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡುತ್ತದೆ. ವೀಕ್ಷಕರು ನ್ಯಾಯಾಧೀಶರ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುತ್ತಾರೆ ಮತ್ತು ವಕೀಲರನ್ನು ಅವಮಾನಿಸುವ ಟೀಕೆಗಳನ್ನು ಪೋಸ್ಟ್ ಮಾಡುತ್ತಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಕೋರ್ಟ್ ಕಲಾಪದ ವೀಡಿಯೊಗಳನ್ನು ವೈಯಕ್ತಿಕ ಮತ್ತು ರಾಜಕೀಯ ಲಾಭಕ್ಕಾಗಿ ತಪ್ಪಾಗಿ ಡಿಜಿಟಲ್ ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ಕೆಲ ವೀಡಿಯೊ ಕಂಟೆಂಟ್ ಕ್ರಿಯೇಟರ್ಸ್ ಉದ್ದೇಶಪೂರ್ವಕವಾಗಿ ವಕೀಲರ ವೃತ್ತಿಗೆ ಕಪ್ಪುಮಸಿ ಬಳಿದಿದ್ದಾರೆ ಎಂದಿರುವ ಕೋರ್ಟ್, ಇಷ್ಟು ಮಾತ್ರವಲ್ಲದೆ ಇದು ನ್ಯಾಯಾಂಗದ ಮೇಲೆ ಸಾರ್ವಜನಿಕರ ನಂಬಿಕೆಗೆ ಅಡ್ಡಿಯಾಗುತ್ತಿದೆ ಎಂದಿದೆ.