ಹೆತ್ತ ತಾಯಿಯನ್ನು ದುರುಳ ಮಕ್ಕಳು ಮರಕ್ಕೆ ಕಟ್ಟಿ ಚೆನ್ನಾಗಿ ಥಳಿಸಿದ್ದು, ನಂತರ ಜೀವಂತವಾಗಿ ಸುಟ್ಟುಹಾಕಿದ್ದಾರೆ. ತ್ರಿಪುರದ ಕಮರ್ ಬಾರಿ ಜಿಲ್ಲೆಯ ಚಂಪಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದ್ದೊಂದು ಪೈಶಾಚಿಕ ಕೃತ್ಯ ನಡೆದಿದೆ. ಘಟನೆ ಸಂಬಂಧ ಮಹಿಳೆಯ ಇಬ್ಬರು ಮಕ್ಕಳನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಭೂಮಿ ಹಂಚಿಕೆ ಸಂಬಂಧ ಗಲಾಟೆಯಾಗಿದ್ದು, ತಾಯಿಯ ವಿರುದ್ಧವೇ ಇಬ್ಬರೂ ಗಂಡು ಮಕ್ಕಳು ತಿರುಗಿಬಿದ್ದಿದ್ದಾರೆ. ತಾಯಿಯನ್ನು ಮರಕ್ಕೆ ಕಟ್ಟಿ ದೌರ್ಜನ್ಯ ನಡೆಸಿದ್ದಾರೆ.. ತೀವ್ರ ಹಲ್ಲೆ ಮಾಡಿ ಜೀವಂತವಿರುವಾಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.62 ವರ್ಷದ ಮಹಿಳೆ ವರ್ಷದ ಹಿಂದಷ್ಟೇ ತನ್ನ ಗಂಡನನ್ನು ಕಳೆದುಕೊಂಡಿದ್ದಳು.
ಹೀಗಾಗಿ ಆಕೆ ಒಬ್ಬ ಮಗನ ಮನೆಯಲ್ಲಿ ವಾಸವಿದ್ದಳು. ಮತ್ತೊಬ್ಬ ಮಗ ಅಗರ್ತಾಲದಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ.ಪಿತ್ರಾರ್ಜಿತ ಭೂಮಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿಯ ಜೊತೆ ಇಬ್ಬರೂ ಮಕ್ಕಳು ಜಗಳವಾಡಿ ಈ ಕೃತ್ಯ ಎಸಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೋರ್ಟ್ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ.