ರಾಜ್ಯ ಸರ್ಕಾರವು ಮೀನುಗಾರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಮೀನುಗಾರಿಕೆ ಇಲಾಖೆ ವತಿಯಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಮುದ್ರ ಆಂಬುಲೆನ್ಸ್ ಆರಂಭಕ್ಕೆ ನಿರ್ಧರಿಸಲಾಗಿದೆ.ಕರಾವಳಿಯ ಮೀನುಗಾರರು ಮತ್ತು ಪ್ರವಾಸಿಗರ ಸುರಕ್ಷತೆಗಾಗಿ ಸಮುದ್ರ ಆಂಬುಲೆನ್ಸ್ ಸೇವೆ ಒದಗಿಸುವಂತೆ ಅನೇಕ ವರ್ಷಗಳಿಂದ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುತ್ತಿತ್ತು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರಾವಳಿ ಭಾಗದಲ್ಲಿ ಪ್ರಚಾರ ಮಾಡುವಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮುದ್ರ ಅಂಬುಲೆನ್ಸ್ ಸೇವೆ ಆರಂಭಿಸುವಂತೆ ಮೀನುಗಾರರು ಒತ್ತಾಯಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮುದ್ರ ಆಂಬುಲೆನ್ಸ್ ಸೇವೆ ಕಲ್ಪಿಸುವಂತೆ ಸೂಚನೆ ನೀಡಿದ್ದರು.
ಅಂತೆಯೇ 2024- 25 ನೇ ಸಾಲಿನ ಬಜೆಟ್ ನಲ್ಲಿ ಹಣ ಮೀಸಲಿಡಲಾಗಿತ್ತು. ಇದೀಗ ಸಮುದ್ರ ಆಂಬುಲೆನ್ಸ್ ಖರೀದಿಗೆ ಮೀನುಗಾರಿಕೆ ಇಲಾಖೆ ಮುಂದಾಗಿದ್ದು, ಇನ್ನೂ ಕೆಲವೇ ತಿಂಗಳಲ್ಲಿ ಸಮುದ್ರಕ್ಕೆ ಆಂಬುಲೆನ್ಸ್ ಗಳು ಇಳಿಯಲಿವೆ.320 ಕಿಲೋಮೀಟರ್ ಕರಾವಳಿ ಪ್ರದೇಶದ ಮೂರು ಬಂದರೆಗಳಿಂದ ಸಮುದ್ರ ಆಂಬುಲೆನ್ಸ್ ಸೇವೆ ಆರಂಭಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆ ವ್ಯಾಪ್ತಿಯ ಮಂಗಳೂರು, ಉಡುಪಿ ಜಿಲ್ಲೆಯ ಮಲ್ಪೆ, ಉತ್ತರ ಕನ್ನಡ ಜಿಲ್ಲೆಯ ತದಡಿ ಬಂದರುಗಳಿಂದ ಸಮುದ್ರ ಆಂಬುಲೆನ್ಸ್ ಸೇವೆ ಇರಲಿದೆ.
ಈಗಾಗಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ವೈದ್ಯಕೀಯ ಉದ್ದೇಶಕ್ಕೆ ಇವುಗಳನ್ನು ಬಳಸಿಕೊಳ್ಳಲಾಗುವುದು. ಮೀನುಗಾರರಿಗೆ ಅಥವಾ ಸಾರ್ವಜನಿಕರಿಗೆ ಸಮುದ್ರದಲ್ಲಿ ಸಮಸ್ಯೆಯಾದಾಗ ಕೂಡಲೇ ನೆರವಿಗೆ ಬಂದು ಬೋಟ್ ನಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಇದರೊಂದಿಗೆ ರಕ್ಷಣಾ ಸಿಬ್ಬಂದಿ, ಆಕ್ಸಿಜನ್ ಸಿಲಿಂಡರ್, ವೈದ್ಯಕೀಯ ಪರಿಕರಗಳನ್ನು ಕಲ್ಪಿಸಲಾಗುವುದು.
ಸಮುದ್ರದಲ್ಲಿ ಸಂಭವಿಸುವ ಅಪಘಾತಗಳು ಸೇರಿದಂತೆ ಇನ್ನಿತರ ದುರ್ಘಟನೆಗಳ ಜೊತೆಗೆ ನೈಸರ್ಗಿಕ ವಿಕೋಪದಂತಹ ಸಂದರ್ಭದಲ್ಲಿಯೂ ಸಮುದ್ರ ಆಂಬುಲೆನ್ಸ್ ಗಳನ್ನು ಬಳಸಲು ನಿರ್ಧರಿಸಲಾಗಿದೆ. ಅದರ ಪ್ರಕಾರ ಚಂಡಮಾರುತ, ಪ್ರವಾಹ, ಸುನಾಮಿಯಂತಹ ಸಂದರ್ಭದಲ್ಲಿ ಈ ಆಂಬುಲೆನ್ಸ್ ಗಳನ್ನು ಹೈ ಅಲರ್ಟ್ ನಲ್ಲಿ ಇಡಲಾಗುತ್ತದೆ. ಇವು ಹವಾಮಾನ ಇಲಾಖೆಯ ಮುನ್ಸೂಚನೆಯನ್ನಾಧರಿಸಿ ಕೆಲಸ ಮಾಡಲಿವೆ.