ಭರ್ಜರಿ ಕಾರ್ಯಾಚರಣೆ :ಬರೋಬ್ಬರಿ ಒಂದೂವರೆ ಕೆಜಿ ಚಿನ್ನಾಭರಣ ವಶಕ್ಕೆ
ಮನೆ ಕನ್ನ ಕಳವು ಮಾಡುತ್ತಿದ್ದ ಹೊರರಾಜ್ಯದ ಓರ್ವ ವ್ಯಕ್ತಿಯನ್ನು ಬಂಧಿಸಿ, 1ಕೆಜಿ 700 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ ವಶಕ್ಕೆ ಪಡೆದ ಚಿನ್ನಾಭರಣಗಳ ಮೌಲ್ಯ ₹1 ಕೋಟಿ 36 ಲಕ್ಷ.
ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ಸರಹದ್ದಿನ, ಆರೋಗ್ಯ ಬಡಾವಣೆಯಲ್ಲಿ ವಾಸವಿರುವ ಪಿರ್ಯಾದುದಾರರು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ಅವರ ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿ ಮತ್ತೆ ಸಂಜೆ ವಾಪಸ್ ಬಂದು ನೋಡಲಾಗಿ, ಯಾರೋ ಕಳ್ಳರು ಮನೆಯ ಮುಂಬಾಗಿಲಿನ ಡೋಲಾಕ್‌ನ್ನು ಮೀಟಿ ಒಳಗೆ ಪ್ರವೇಶಿಸಿ, ಕೊಠಡಿಯಲ್ಲಿನ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕನ್ನ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡರೂ ಸಹ ಆರೋಪಿಯ ಸುಳಿವು ದೊರೆತ್ತಿರುವುದಿಲ್ಲ. ತನಿಖೆಯನ್ನು ಮುಂದುವರೆಸಿ, ಭಾತ್ಮಿದಾರರಿಂದ ಮಾಹಿತಿಯನ್ನು ಕಲೆಹಾಕಿ, ಓರ್ವ ವ್ಯಕ್ತಿಯನ್ನು ಉತ್ತರ ಪ್ರದೇಶದ ಮುರಾದಾಬಾದ್‌ನ ಜಿಲ್ಲಾ ಕಾರಾಗೃಹದಿಂದ ಬಾಡಿ ವಾರೆಂಟ್ ಮುಖೇನ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ ಹಾಗೂ ಬೆಂಗಳೂರು ನಗರದಲ್ಲಿ ವಿವಿಧ ಕಡೆಗಳಲ್ಲಿ ಕನ್ನ ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.
ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 14 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು. ತನಿಖೆಯು ಪೂರ್ಣಗೊಳ್ಳದಿದ್ದರಿಂದ ಆರೋಪಿಯನ್ನು ಇನ್ನೂ ಹೆಚ್ಚಿನ ವಿಚಾರಣೆಗಾಗಿ ಪುನಃ 11 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಮನೆ ಕನ್ನ ಕಳವುಮಾಡಿದ್ದ ಚಿನ್ನಾಭರಣಗಳನ್ನು ಉತ್ತರ ಪ್ರದೇಶದ ವಿವಿಧ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡಿರುವುದಾಗಿತಿಳಿಸಿರುತ್ತಾನೆ.
ಮುಂಬೈನ ಜವಾರಿ ಬಜಾರ್‌ನ ಗಿರವಿ ಅಂಗಡಿಯ ಮಾಲೀಕನಿಗೆ ಮಾರಾಟ ಮಾಡಿದ್ದ, 501 ಗ್ರಾಂ ಚಿನ್ನಾಭರಣಗಳನ್ನು ಹಾಗೂ ಆದೇ ದಿನ ಜವಾರಿ ಬಜಾರ್‌ನ ಮತ್ತೊಂದು ಗಿರವಿ ಅಂಗಡಿಯಿಂದ 160 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಯಿತು.
ನವಿ ಮುಂಬೈನ ಗಿರವಿ ಅಂಗಡಿಯೊಂದರಿಂದ 70ಗ್ರಾಂ ಚಿನ್ನಾಭರಣಗಳನ್ನು
ವಶಪಡಿಸಿಕೊಳ್ಳಲಾಯಿತು. ಅದೇ ದಿನ ಮತ್ತೊಂದು ಗಿರವಿ ಅಂಗಡಿಯ ಮಾಲೀಕನಿಗೆ ಚಿನ್ನಾಭರಣವನ್ನು ತಂದು ಹಾಜರುಪಡಿಸುವಂತೆ ನೋಟೀಸ್ ಜಾರಿ ಮಾಡಲಾಗಿರುತ್ತದೆ.
ಗುರುಗಾವ್ ಗಿರವಿ ಅಂಗಡಿಯೊಂದರಿಂದ 130 ಗ್ರಾಂ ಚಿನ್ನಾಭರಣ – ವಶಪಡಿಸಿಕೊಳ್ಳಲಾಯಿತು.
ಈ ಪ್ರಕರಣದ ಆರೋಪಿಯ ವಶದಿಂದ ಒಟ್ಟಾರೆ 1ಕೆಜಿ 700ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ
ಇದರ ಮೌಲ್ಯ 136,00,000/-(ಒಂದು ಕೋಟಿ ಮೂವತ್ತಾರು ಲಕ್ಷ ರೂಪಾಯಿ).
ಈ ಪ್ರಕರಣದ ಆರೋಪಿಯ ಬಂಧನದಿಂದ
1) ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ-6 ಕನ್ನ ಕಳವುಪ್ರಕರಣಗಳು,
2) ಕೆಂಗೇರಿ ಪೊಲೀಸ್ ಠಾಣೆಯ- ಕನ್ನ ಕಳವು ಪ್ರಕರಣ. 3) ಜ್ಞಾನಭಾರತಿ ಪೊಲೀಸ್ ಠಾಣೆಯ- ಕನ್ನ ಕಳವು ಪ್ರಕರಣ. 4) ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯ- ಕನ್ನ ಕಳವು ಪ್ರಕರಣ, 5) ಪೀಣ್ಯ ಪೊಲೀಸ್ ಠಾಣೆಯ- ಕನ್ನ ಕಳವು ಪ್ರಕರಣ, 6) ವಾಣಾಸವಾಡಿ ಪೊಲೀಸ್ ಠಾಣೆಯ-1 ಕನ್ನ ಕಳವು ಪ್ರಕರಣ ಸೇರಿದಂತೆ ಒಟ್ಟು 11 ಕನ್ನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಉಪ ಪೊಲೀಸ್ ಕಮೀಷನರ್ ರವರಾದ ಶ್ರೀ ಗಿರೀಶ್ ಐಪಿಎಸ್ರವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಕಮೀಷನರ್ ರವರಾದ ಶ್ರೀ ಬಸವರಾಜ್ ತೇಲಿ ನಿರ್ದೇಶನದಲ್ಲಿ, ಶ್ರೀ ಕುಮಾರ್ ಎ.ವಿ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಹಾಗೂ ಜ್ಞಾನಭಾರತಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ರಾಜು ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.