ಇಂದಿನ ಯುವ ಪೀಳಿಗೆ ಆಧುನಿಕತೆಯ ಜೊತೆ ಜೊತೆಗೆ ಸಾಮಾಜಿಕ ಪಿಡುಗಿಗೂ ಸಹ ಹೊಂದಿಕೊಳ್ಳುತ್ತಿರುವುದು ಸಹಜವಾಗಿಯೇ ಆತಂಕ ಉಂಟುಮಾಡುತ್ತಿದೆ. ಸಾಮಾಜಿಕ ಪಿಡುಗಾಗಿ ಕಾಣಿಸಿಕೊಳ್ಳುತ್ತಿರುವುದು ಮಾದಕ ವ್ಯಸನ.
ಪೊಲೀಸರು ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಸಮರ ಸಾರಿದ್ದಾರೆ. ಮನುಷ್ಯನ ಮಾನಸಿಕ ಹಾಗೂ ದೈಹಿಕ ನಡವಳಿಕೆಯ ಮೇಲೆ ನೇರವಾಗಿ ಪ್ರಭಾವ ಬೀರುವ ಮಾದಕ ದ್ರವ್ಯವನ್ನು ಸಮಾಜದಿಂದಲೇ ತೊಲಗಿಸಬೇಕೆಂಬ ಪಣ ಕೈಗೊಂಡವರು ಪೊಲೀಸ್ ಇಲಾಖೆ.
ಕೇವಲ ಮಾದಕ ವ್ಯಸನಿಗಳನ್ನು ಕಂಡು ಹಿಡಿದು ಅವರಿಗೆ ಅರಿವು ಮೂಡಿಸಿದರೆ ಮಾತ್ರ ಇದರಿಂದ ಮುಕ್ತಿ ಸಾಧ್ಯವಿಲ್ಲ. ಇದರ ಮುಕ್ತಿಗಾಗಿ ಮೂಲದಿಂದಲೇ ಇದನ್ನು ಸರಿ ಪಡಿಸಬೇಕೆಂದು ನಿರ್ಧರಿಸಿ ಮಾದಕ ದ್ರವ್ಯಗಳ ಮಾರಾಟ ಜಾಲವನ್ನೇ ಭೇದಿಸಲು ಸನ್ನದ್ಧರಾಗಿದ್ದಾರೆ.
ಈ ಸಂಚಿಕೆಯ ಕಾಫಿ ವಿಥ್ ಸೂಪರ್ ಕಾಪ್ಸ್ ನಲ್ಲಿ ಈ ಡ್ರಗ್ಸ್ ಜಾಲವನ್ನು ಭೇದಿಸಿದ ಸಂಪಂಗಿ ರಾಮನಗರ ಪೊಲೀಸರನ್ನು ಕೇಂದ್ರ ವಿಭಾಗದ ಡಿಸಿಪಿ ಶೇಖರ್.ಎಚ್. ಟಿ ಶ್ಲಾಘಿಸಿದ್ದಾರೆ. ಸಂಪಂಗಿರಾಮನಗರ ವ್ಯಾಪ್ತಿಯಲ್ಲಿ ರಾಜಸ್ತಾನ ಮೂಲದ ವ್ಯಕ್ತಿಯೊಬ್ಬ ರಾಜಸ್ತಾನದಿಂದ ಅಫೀಮನ್ನು ತಂದು ಮಾರಾಟ ಮಾಡುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಆರೋಪಿಯನ್ನು ಅಫೀಮನ್ನು ಮಾರಾಟ ಮಾಡುವಾಗಲೇ ಮಾಲಿನ ಸಮೇತ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಆರೋಪಿತನಿಂದ 1850ಗ್ರಾಂನ ಎರಡು ಲಕ್ಷ ಮೌಲ್ಯದ ಅಫೀಮನ್ನು ವಶಕ್ಕೆ ಪಡೆದು ಆತನ ವಿರುದ್ಧ ಎನ್ ಡಿ ಪಿ ಎಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶಿವಾನಂದ ಚಲವಾದಿ ಯವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಹರೀಶ್ ಕುಮಾರ್, ಪಿಎಸ್ಐ ಶಿವಕುಮಾರ್, ಪಿಎಸ್ಐ ಅರಳನಗೌಡ, ಸಿಬ್ಬಂದಿಗಳಾದ ಮಂಜುನಾಥ್, ವಸಂತಪ್ಪ, ಮುನಿರಾಜು, ಇವರುಗಳ ಕಾರ್ಯಕ್ಕೆ ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶೇಖರ್. ಎಚ್. ಟಿ ಯವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.