ಗುಂಡು ಪಾರ್ಟಿ ವೇಳೆ ಕಾಲು ತುಳಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಘಟನೆ ನಡೆದಿದೆ. ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಸೊಣ್ಣೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆ ಮಾಡಿದ ಆರೋಪಿ ತಲೆ ಮರೆಸಿಕೊಂಡಿದ್ದಾನೆ.52 ವರ್ಷದ ಮೂರ್ತಿ ಎಂಬುವವರೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಪಕ್ಕದ ಮನೆಯ 27 ವರ್ಷದ ಕೀರ್ತಿ ಎಂಬಾತನೇ ಕೊಲೆಗಾರನಾಗಿದ್ದು, ಆರೋಪಿ ಕೊಲೆ ಮಾಡಿದ ನಂತರ ಪರಾರಿಯಾಗಿದ್ದಾನೆ.
ಕೊಲೆಯಾದ ಮೂರ್ತಿ ಹಸು ಸಾಕಾಣಿಕೆ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆರೋಪಿ ಕೀರ್ತಿ ಫೈನಾನ್ಸ್ ವ್ಯವಹಾರ ನಡೆಸುತ್ತಾನೆ ಎಂದು ತಿಳಿದುಬಂದಿದೆ.ಕೊಲೆಯಾದ ಮೂರ್ತಿಯವರ ಸಹೋದನ ಮನೆಯಲ್ಲಿ ಭಾನುವಾರ ಪಿತೃಪಕ್ಷದ ಪೂಜೆ ಇತ್ತು. ಹೀಗಾಗಿ ಅಕ್ಕಪಕ್ಕದ ಮನೆಯವರು, ಸಂಬಂಧಿಕರನ್ನು ಊಟಕ್ಕೆ ಕರೆಯಲಾಗಿತ್ತು. ರಾತ್ರಿ ಎಲ್ಲರಿಗೂ ಮದ್ಯಪಾನ ಪಾರ್ಟಿ ಏರ್ಪಡಿಸಲಾಗಿತ್ತು.ಈ ವೇಳೆ ಪಾನಮತ್ತರಾಗಿದ್ದ ಮೂರ್ತಿ ಆರೋಪಿ ಕೀರ್ತಿ ಕಾಲು ತುಳಿದಿದ್ದಾರೆ.
ಇದರಿಂದ ಕೋಪಗೊಂಡ ಕೀರ್ತಿ ಗಲಾಟೆ ತೆಗೆದಿದ್ದಾನೆ. ಇದು ವಿಕೋಪಕ್ಕೆ ಹೋಗಿ ಅಲ್ಲೇ ಇದ್ದ ಚಾಕುವಿನಿಂದ ಮೂರ್ತಿಗೆ ಇರಿದಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಮೂರ್ತಿ ಸಾವನ್ನಪ್ಪಿದ್ದಾರೆ.ಘಟನೆ ನಂತರ ಕೀರ್ತಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದುಬಂದಿದೆ.ಜ್ಞಾನಭಾರತಿ ಠಾಣಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.