ಸಮಾಜ ಎಷ್ಟೊಂದು ಮುಂದುವರೆದಿದೆ. ಎಷ್ಟೊಂದು ಟೆಕ್ನಾಲಜಿಗಳು ನಮ್ಮ ಮುಂದೆ ಬಂದಿವೆ.ಯಾವುದು ತಪ್ಪು ಯಾವುದು ಸರಿ ಅಂತ ತಿಳಿಯೋದಕ್ಕೆ ಈಗ ಸಾಕಷ್ಟು ದಾರಿಗಳಿವೆ. ಹೀಗಿದ್ದರೂ ಜನ ಮೋಸ ಹೋಗುತ್ತಲೇ ಇದ್ದಾರೆ.ಅತಿ ಆಸೆಗೆ ಹೋಗಿ ಇದ್ದುದೆಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೊಂದು ತಾಜಾ ಉದಾಹರಣೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿರುವ ಘಟನೆ.
ಕಿಲಾಡಿ ದಂಪತಿಯೊಬ್ಬರು ವೃದ್ಧರನ್ನು ಯುವಕರನ್ನಾಗಿ ಮಾಡುತ್ತೇನೆ ಎಂದು ನಂಬಿಸಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ.ನಮ್ಮ ವಯಸ್ಸನ್ನು ರಿವರ್ಸ್ ಮಾಡುವ ಮಷಿನ್ ಇದೆ.. ಅದು ಮೇಡ್ ಇನ್ ಇಸ್ರೇಲ್‌ನ ಟೈಮ್ ಮಷಿನ್.ಅದರ ಮೂಲಕ ವಯಸ್ಸಾದವರನ್ನು ಯುವಕರನ್ನಾಗಿ ಮಾಡಬಹುದು ಎಂದು ಆ ದಂಪತಿ ಹೇಳಿಕೊಂಡಿತ್ತು.ಆ ಕಿಲಾಡಿ ದಂಪತಿಯ ಹೆಸರು ರಾಜೀವ್ ಕುಮಾರ್ ದುಬೆ ಹಾಗೂ ಆತನ ಪತ್ನಿ ರಶ್ಮಿ ದುಬೆ.
ಇವರಿಬ್ಬರೂ ಕಾನ್ಪುರದಲ್ಲಿ ರಿವೈವಲ್ ವರ್ಲ್ಡ್ ಎಂಬ ಥೆರಪಿ ಸೆಂಟರ್ ಓಪನ್ ಮಾಡಿದ್ದು, ಇಸ್ರೇಲ್‌ನಿಂದ ಮಷಿನ್ ಒಂದನ್ನು ತಂದಿದ್ದು, ಅದರ ಮೂಲಕ 60 ವರ್ಷದ ಪ್ರಾಯದ ವೃದ್ಧರನ್ನು 25ರ ತರುಣರಂತೆ ಮಾಡಬಹುದು ಎಂದು ನಂಬಿಸಿದ್ದರು. ಇದನ್ನು ನಂಬಿದ ಹಲವಾರು ವೃದ್ಧರು ಇವರಿಗೆ ಹಣ ನೀಡಿ ಮೋಸ ಹೋಗಿದ್ದಾರೆ.ರಾಜೀವ್ ಕುಮಾರ್ ದುಬೆ ಹಾಗೂ ರಶ್ಮಿ ದುಬೆ ದಂಪತಿ ಬರೋಬ್ಬರಿ 35 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಬಗ್ಗೆ ವೃದ್ಧರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ನಡುವೆ ಆರೋಪಿ ದಂಪತಿ ಪರಾರಿಯಾಗಿದ್ದಾರೆ.